ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್ ಗಳೇ ಹೆಚ್ಚಾಗಿರುತ್ತಿದ್ದವು. ಇದರ ಜೊತೆಗೆ ಈ ಫೈಲ್ಗಳ ಬಗ್ಗೆ ಯಾವುದೇ ಸೂಕ್ತ ಚರ್ಚೆಯಾಗದೇ ಪಾಸ್ ಆಗುತ್ತಿದ್ದವು. ಅಂದು ನಾನು ಪತ್ರ ಬರೆದು ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಹೇಳಿದ್ದೆ ಆದರೆ ಸರ್ಕಾರ ಈ ಕುರಿತು ಚಿಂತಿಸಿಲ್ಲ ಎಂದು ಹಾಲಿ ಶಾಸಕ ಹಾಗೂ ಮೈಸೂರಿನ ಮಾಜಿ ಉಸ್ತುವಾರಿ ಸಚಿವರೂ ಆಗಿದ್ದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಇರುವುದು ಜನಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಮುಡಾ ಸಭೆಯ ಬಹುತೇಕ ಸಬ್ಜೆಕ್ಟ್ಗಳು ಶಾಸಕರುಗಳಿಗೆ ಸೇರಿದ್ದವು. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ತಮ್ಮ ವಾಸ ಸ್ಥಳವನ್ನು ಮೈಸೂರು ಎಂದು ತೋರಿಸುತ್ತಾರೆ. ಈ ಮಟ್ಟಕ್ಕೆ ಇಲ್ಲಿಯ ಶಾಸಕರು ಲಾಬಿ ಮಾಡುತ್ತಾರೆ. ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಹೇಳಿದ್ದಾರೆ.
ನಾನು ಇಲ್ಲಿ ಅಧಿಕಾರದಲ್ಲಿರುವಾಗಲೇ ಭ್ರಷ್ಟಾಚಾರ ನಡೆದಿತ್ತು. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪತ್ರ ಬರೆದು ಆಯುಕ್ತರ ಬದಲಾವಣೆಗೆ ಯತ್ನಿಸಿದ್ದೆ. ಆದರೆ ಸರಕಾರದ ಕೆಲವರು ಜಾತಿ ಕಾರಣಕ್ಕೆ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಯುಕ್ತರೂ ಕೋರ್ಟ್ಗೆ ಹೋಗಿ ಅಧಿಕಾರ ಉಳಿಸಿಕೊಂಡಿದ್ದರು.
ನನ್ನ ಅವಧಿಯಲ್ಲಿ ಒಂದೇ ಒಂದು ಮುಡಾ ನಿವೇಶನ ನೀಡಿದ್ದರೆ. ಅಧಿಕಾರಿಗಳಿಗೆ ಒತ್ತಡ ಹಾಕಿ ಯಾರಿಗಾದರು ನಿವೇಶನ ಕೊಡಿಸಿದ್ದೀನಿ ಎಂದು ತಿಳಿದುಬಂದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತಿನಿ ಎಂದು ಹೇಳಿದ್ದಾರೆ.