ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಉತ್ತರದ ಮುಖ್ಯಾಂಶಗಳು ಹೀಗಿವೆ.
ಎಸ್‌ಸಿಪಿ ಮತ್ತು ಟಿಎಸ್‌ಪಿ:
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗಾಗಿ ನಮ್ಮ ಸರ್ಕಾರ ಈ ಬಾರಿ 42,018 ರೂ.ಗಳನ್ನು ಒದಗಿಸಿದೆ. ನಾವು ಪರಿಶಿಷ್ಟ ಸಮುದಾಯಗಳ ಏಳಿಗೆಯನ್ನು ಪ್ರಾಮಾಣಿಕವಾಗಿ ಬಯಸುವವರು. ನಮ್ಮ ಕಾಳಜಿ ಕೇವಲ ಬಾಯಿ ಮಾತಿನದಲ್ಲ. 2020-21 ರಿಂದ 2022-23 ರವರೆಗೆ 3 ವರ್ಷಗಳ ಅವಧಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿಗಾಗಿ 80,415 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ನಾವು 2023 ರಿಂದ ಈಗ ಮಂಡಿಸಿರುವ ಬಜೆಟ್‌ವರೆಗೆ 1,15,509 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಬಿಜೆಪಿಯ 3 ವರ್ಷಗಳಿಗೆ ಹೋಲಿಸಿದರೆ ನಾವು 35,094 ಕೋಟಿ ರೂಗಳನ್ನು ಹೆಚ್ಚಿಗೆ ಒದಗಿಸಿದ್ದೇವೆ. ಶೇ.43.64 ರಷ್ಟು ಹೆಚ್ಚಿನ ಅನುದಾನವನ್ನು ಒದಗಿಸಿದಂತಾಗುತ್ತದೆ. ಒಟ್ಟಾರೆ ಸಮಾಜ ಕಲ್ಯಾಣ ಇಲಾಖೆಗೆ ಶೇ.52.5 ರಷ್ಟು ಹೆಚ್ಚು ಅನುದಾನವನ್ನು ಕೊಟ್ಟಿದ್ದೇವೆ.
ವಿರೋಧ ಪಕ್ಷದ ನಾಯಕರು ಪ್ರಾಜೆಕ್ಟ್ ಟೈಗರ್ ಮತ್ತು ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಗೂ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣವನ್ನು ವಿನಿಯೋಗಿಸಲಾಗಿದೆ ಎಂದಿದ್ದಾರೆ. ಆದರೆ ಇದು ಕೇಂದ್ರ ಸರ್ಕಾರದ ಸಮಸ್ಯೆ. ಕೇಂದ್ರ ಸರ್ಕಾರವು ರೂಪಿಸಿರುವ ಕೇಂದ್ರ ಪುರಸ್ಕೃತ ಯೋಜನೆಗೆ ಮ್ಯಾಚಿಂಗ್ ಗ್ರ್ಯಾಂಟ್ ಒದಗಿಸಿದ್ದೇವೆ ಅಷ್ಟೇ.
ನಮ್ಮದು ಮುಸ್ಲಿಂ ಬಜೆಟ್ ಅಲ್ಲ, ಸರ್ವೋದಯದ ಬಜೆಟ್. ರಾಷ್ಟ್ರಕವಿ ಕುವೆಂಪು ಅವರು ಪದ್ಯದ ಸಾಲುಗಳು ಹೀಗಿವೆ;
“ಬಾರಿಸು ಕನ್ನಡ ಡಿಂಡಿಮವ!! ಓ! ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೇತರ ಕೃತಿ ಕೃತಿಯಲ್ಲಿ, ಮೂಡಲಿ ಮಂಗಳ ಮತಿ ಮತಿಯಲ್ಲಿ, ಕವಿ ಋಷಿ ಸಂತರ ಆದರ್ಶದಲ್ಲಿ, ಸರ್ವೋದಯವಾಗಲಿ ಸರ್ವರಲಿ”
ಇದು ಈ ಸಂದರ್ಭಕ್ಕೆ ಅತ್ಯಂತ ಸೂಕ್ತವಾದ ಪದ್ಯವಾಗಿದೆ. ಇನ್ನೆಷ್ಟು ದಿನ ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ದ್ವೇಷ, ಹಿಂಸೆ, ಅಸಹನೆಯನ್ನು ಹುಟ್ಟು ಹಾಕುತ್ತೀರಿ? ಒಟ್ಟಿಗೆ ಬಾಳಲು ಯಾವ ಸಮಸ್ಯೆಯಿದೆ? ಎನ್ನುವ ಕುವೆಂಪು ಕಡೆಯದಾಗಿ ಸರ್ವೋದಯವಾಗಲಿ ಸರ್ವರಲಿ ಎನ್ನುತ್ತಾರೆ.
ನಾವು ಬಜೆಟ್ಟಿನ ಪುಸ್ತಕದಲ್ಲಿ ಹೇಳಿದ್ದೆವು. ನಮ್ಮ ಉದ್ದೇಶ ಸಮಾಜವನ್ನು ಸೋಷಿಯಲ್ ಡಾರ್ವಿನಿಸಂ ಕಡೆಗೆ ತೆಗೆದುಕೊಂಡು ಹೋಗುವುದಲ್ಲ. ಸಂವಿಧಾನದ ಕಡೆಗೆ ಮುನ್ನಡೆಸುವುದು. ಮನುವಾದವು ಸೋಷಿಯಲ್ ಡಾರ್ವಿನಿಸಮ್ಮನ್ನು ಹೇಳುತ್ತದೆ. ಇದು ಮನುಷ್ಯ ಸಮಾಜಕ್ಕೂ ಅನ್ವಯವಾದರೆ ದಮನಿತ ಸಮುದಾಯಗಳು ಮತ್ತು ಮಹಿಳೆಯರು ಬದುಕುವುದು ಹೇಗೆ? ಈ ವರ್ಗಗಳಿಗೆ ನ್ಯಾಯ ಕೊಡುವುದು ಸಂವಿಧಾನ ಮಾತ್ರ. ನಾವು ಸಂವಿಧಾನದ ಆಶಯಗಳ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. ಹಾಗಾಗಿ ನಾವು ಸರ್ವೋದಯವಾಗಲಿ ಸರ್ವರಲಿ ಎಂಬುದನ್ನು ಮಾತಿಗೋಸ್ಕರ ಬಳಸುವುದಿಲ್ಲ. ಬದಲಾಗಿ ಅದನ್ನು ನಮ್ಮ ಸಿದ್ಧಾಂತವಾಗಿಸಿಕೊಂಡು ಕೆಲಸ ಮಾಡುತ್ತಿದ್ದೇವೆ.
ಮುಸ್ಲಿಂ ಸಮುದಾಯಕ್ಕೆ ಶೇ.4 ರಷ್ಟು ಗುತ್ತಿಗೆ ನೀಡುತ್ತಿರುವ ವಿಚಾರ:
ವಿರೋಧ ಪಕ್ಷದ ನಾಯಕರಾದಿಯಾಗಿ ವಿರೋಧ ಪಕ್ಷದ ಅನೇಕರು ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿರುವ ವಿಚಾರದ ಕುರಿತು ಆಕ್ಷೇಪದ ಧ್ವನಿಯಲ್ಲಿ ಮಾತನಾಡಿದ್ದಾರೆ. ರಿಲೀಜನ್ ಬೇಸ್ ಮೇಲೆ ಮೀಸಲಾತಿ ಕೊಟ್ಟಿರುವುದು ತಪ್ಪು ಎಂದು ಆರ್. ಅಶೋಕ್ ಅವರು ಪ್ರಸ್ತಾಪಿಸಿದ್ದಾರೆ.
ಅಶೋಕ್ ಅವರು ಎಸ್‌ಸಿಪಿ ಟಿಎಸ್‌ಪಿ ವಿಚಾರಗಳನ್ನು ಮಾತನಾಡುವಾಗ ಕರ್ನಾಟಕದ ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ಮಾತನಾಡಿದ್ದಾರೆ. ಅವರು ಪ್ರಸ್ತಾಪ ಮಾಡಿದ್ದು ಒಳ್ಳೆಯದಾಯಿತು. 2022 ರಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿಗಳಿದ್ದಾಗ ಹಿಂದಿನ ಸರ್ಕಾರ ಕರ್ನಾಟಕ ಮಾನವ ಅಭಿವೃದ್ಧಿ ವರದಿಯನ್ನು ಬಿಡುಗಡೆ ಮಾಡಿದೆ. ಸದರಿ ವರದಿಯಲ್ಲಿ ಮಕ್ಕಳ ಮರಣ, ಆರೋಗ್ಯ, ಶಾಲಾ ದಾಖಲಾತಿ, ಮಹಿಳಾ ಶಿಕ್ಷಣ, ಶಿಕ್ಷಣ ಸೂಚ್ಯಂಕ, ಸುಧಾರಿತ ಕುಡಿಯುವ ನೀರು, ಸುಧಾರಿತ ವಿದ್ಯುತ್ ಲಭ್ಯತೆ, ಸುಧಾರಿತ ಶೌಚಾಲಯ, ಶೇ.ವಾರು ಪಕ್ಕಾ ಮನೆ, ಸುಧಾರಿತ ಅಡುಗೆ ಇಂಧನ, ವರಮಾನ ಸೂಚ್ಯಂಕಗಳನ್ನು ಆಧರಿಸಿ ಒಟ್ಟಾರೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಯಾವ ಯಾವ ಪ್ಯಾರಾಮೀಟರುಗಳಲ್ಲಿ ಎಷ್ಟೆಷ್ಟು ಅಂಶಗಳನ್ನು ಗಳಿಸಲಾಗಿದೆ ಎಂಬುದು ಈ ಅಧ್ಯಯನದಿಂದ ದೃಢಪಡುತ್ತದೆ.
ಕರ್ನಾಟಕದ ಸಾಮಾನ್ಯ ವರ್ಗಗಳ ಮಾನವ ಅಭಿವೃದ್ಧಿ ಸೂಚ್ಯಂಕ 0.644 ರಷ್ಟಿದೆ. ಸಾಮಾನ್ಯ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನಡುವೆ 0.274 ಅಂಶಗಳ ವ್ಯತ್ಯಾಸವಿದೆ. ಪರಿಶಿಷ್ಟ ಪಂಗಡಗಳಿಗೆ 0.204 ಅಂಶಗಳಷ್ಟು ವ್ಯತ್ಯಾಸವಿದೆ. ಪರಿಶಿಷ್ಟ ಜಾತಿಗಳ ನಡುವೆ 0.154 ಅಂಶಗಳಷ್ಟು ವ್ಯತ್ಯಾಸವಿದೆ. ಈ ಮಾಹಿತಿಯು ಹಲವು ಸತ್ಯಗಳನ್ನು ಹೇಳುತ್ತಿದೆ. ನಾನು ವಿರೋಧ ಪಕ್ಷದವರನ್ನು ಕೇಳಬಯಸುತ್ತೇನೆ. ಸಮಾಜದ ಒಂದು ವರ್ಗ ಸಂಪೂರ್ಣ ಅಂಗವಿಕಲವಾದರೆ ಇಡೀ ಸಮಾಜವನ್ನು ಮುನ್ನಡೆಸಲು ಹೇಗೆ ಸಾಧ್ಯ? ಅಲ್ಪಸಂಖ್ಯಾತರ ಪ್ರಮಾಣ ಸುಮಾರು ಶೇ.15 ರಷ್ಟಿದೆ. ಇಷ್ಟು ದೊಡ್ಡ ಜನಸಂಖ್ಯೆಯ ಸಮುದಾಯದ ಕಲ್ಯಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ 4514 ಕೋಟಿ ರೂಪಾಯಿಗಳನ್ನು ಒದಗಿಸಿದ್ದೇವೆ. ಇದು ಒಟ್ಟಾರೆ ಬಜೆಟ್‌ನಲ್ಲಿ ಶೇ.1.1 ರಷ್ಟು ಮಾತ್ರ. ಇಷ್ಟಕ್ಕೆ ಇಷ್ಟೊಂದು ದ್ವೇಷ ಯಾಕೆ?
ಶಿಕ್ಷಣ, ಆರೋಗ್ಯ, ಗುಣ ಮಟ್ಟದ ಜೀವನದ ವಿಚಾರದಲ್ಲಿ ಪರಿಶಿಷ್ಟ ಪಂಗಡಗಳಿಗಿಂತಲೂ ದಯನೀಯ ಸ್ಥಿತಿಯಲ್ಲಿ ಇರುವುದರ ಕುರಿತು ಹಿಂದಿನ ಸರ್ಕಾರವೇ ಮಾಡಿರುವ ವರದಿಯು ಹೇಳುತ್ತಿದೆ. ಶೇ.14 ರಷ್ಟು ಜನರಿಗೆ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಮನೆ, ಶೌಚಾಲಯ ಮುಂತಾದವುಗಳನ್ನು ಇಲ್ಲವಾಗಿಸಿ ಭಾರತವನ್ನು ವಿಶ್ವಗುರುವಾಗಿಸುವುದು ಹೇಗೆ? 14 ಪರ್ಸೆಂಟ್ ಜನರನ್ನು ಅಭಿವೃದ್ಧಿಯ ಹಾದಿಗೆ ತರದೆ ಜಿಎಸ್‌ಡಿಪಿ/ ಜಿಡಿಪಿಗಳನ್ನು ಹೆಚ್ಚು ಮಾಡಲು ಹೇಗೆ ಸಾಧ್ಯ? ಇದಷ್ಟೇ ಅಲ್ಲ. ಈ ಸಮುದಾಯಗಳನ್ನು ದೂರವಿಡುವುದು ಸಂವಿಧಾನ ವಿರೋಧಿ ನಡೆಯೂ ಕೂಡ ಆಗಿದೆ.
ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ಈ ಬಾರಿಯ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆ ಕ್ರಮಗಳಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿಯೂ ಸೇರಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಪ್ರವರ್ಗ-1, 2ಎ ಮತ್ತು 2ಬಿಗಳನ್ನು ಸೇರಿಸಿ ಈ ಕ್ರಮ ತೆಗೆದುಕೊಂಡಿದ್ದೇವೆ. ಈ ವರ್ಗಗಳಲ್ಲಿ ಗುತ್ತಿಗೆದಾರರೇ ಇಲ್ಲವೆನ್ನುವಷ್ಟು ಕಡಿಮೆ ಇದ್ದಾರೆ. ಎರಡನೆಯ ಅಂಶ; ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು, ಅವರಿಗೆ ಮೀಸಲಾತಿ ಕೊಡಬಾರದಿತ್ತು ಎಂದು ಆಕ್ಷೇಪಗಳನ್ನು ಎತ್ತಿದ್ದಾರೆ. ಅಶೋಕ್ ಹಾಗೂ ವಿರೋಧ ಪಕ್ಷದವರು ಸ್ವಲ್ಪ ಇತಿಹಾಸವನ್ನು ಓದಿಕೊಂಡರೆ ಒಳ್ಳೆಯದು ಎನ್ನುವುದು ನನ್ನ ಭಾವನೆ. ಇತಿಹಾಸದ ತಿಳುವಳಿಕೆ ಇರುವವರು ಹೀಗೆ ಮಾತನಾಡುವುದಿಲ್ಲ.
1919 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಸಮಿತಿಯನ್ನು ರಚಿಸಿದರು. ಸಮಿತಿಯು ಮುಸ್ಲಿಂ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶೇ. 82 ರಷ್ಟು, ಬ್ರಾಹ್ಮಣರಿಗೆ ಶೇ. 20 ರಷ್ಟು ಮೀಸಲಾತಿಯನ್ನು [10 ಹುದ್ದೆಗಳಿದ್ದರೆ 2 ಹುದ್ದೆ ಬ್ರಾಹ್ಮಣರಿಗೆ, 8 ಹುದ್ದೆ ಮುಸ್ಲಿಂ ಮತ್ತು ಹಿಂದುಗಳಿಗೆ] ಕೊಡಲು ಶಿಫಾರಸ್ಸು ಮಾಡಿತು. ವಿಶ್ವೇಶ್ವರಯ್ಯನವರ ನಂತರ ಕಾಂತರಾಜ ಅರಸ್ ಅವರು ದಿವಾನರಾಗಿದ್ದಾಗ ಈ ವರದಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕರ್ನಾಟಕ ಸರ್ಕಾರಗಳು ಸಂವಿಧಾನದ ಆರ್ಟಿಕಲ್ 15[4], 16[4] ರ ಪ್ರಕಾರ ಮೀಸಲಾತಿಯನ್ನು ಕೊಟ್ಟುಕೊಂಡು ಬಂದಿವೆ. ಯಾಕೆಂದರೆ ಈ ಸಮುದಾಯವು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ ಎಂಬ ಕಾರಣದಿಂದಲೆ ಮೀಸಲಾತಿಯನ್ನು ಕೊಡಲಾಗಿದೆ. ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಮೀಸಲಾತಿಯನ್ನು ಕೊಡಬಹುದೆಂದು ರಾಜ್ಯದ ಹಲವು ಸಮಿತಿಗಳು ಹಾಗೂ ಆಯೋಗಗಳು ಶಿಫಾರಸ್ಸು ಮಾಡಿವೆ.ರಾಜಕಾರಣವನ್ನು ಪ್ರಾಮಾಣಿಕ ಕಾಳಜಿಯಿಂದ ಮಾಡಬೇಕು. ಅದು ಅರ್ಥಬದ್ಧವಾಗಿರಬೇಕು. ನಮ್ಮ ರಾಜಕಾರಣ ಪ್ರಾಮಾಣಿಕವಾಗಿರುವುದು ಮುಖ್ಯ. ಇಲ್ಲದಿದ್ದರೆ, ಓಟಿನ ಗಿಮಿಕ್ಕಿಗಾಗಿ ರಾಜಕಾರಣ ಮಾಡಿದರೆ ಮುಸ್ಲಿಂ ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಜನರ ಮುಂದೆ ಒಂದು ತೀರ್ಮಾನ ತೆಗೆದುಕೊಂಡು, ಸುಪ್ರೀಂ ಕೋರ್ಟಿನಲ್ಲಿ ಒಂದು ನಿಲುವನ್ನು ತೆಗೆದುಕೊಂಡಂತೆ ಎಲ್ಲ ವಿಚಾರಗಳಿಗೂ ಅನ್ವಯವಾಗುತ್ತದೆ. ಒಟ್ಟಾರೆ ನಮ್ಮ ಸರ್ಕಾರವು ನಾಡಿನ ಸಮಗ್ರ ಅಭಿವೃದ್ಧಿಗಾಗಿ ದುಡಿಯುತ್ತಿದೆ. ಸುಸ್ಥಿರ ಅಭಿವೃದ್ಧಿಯತ್ತ ಕರ್ನಾಟಕವನ್ನು ಮುನ್ನಡೆಸುವುದು ನಮ್ಮ ಗುರಿ. ಮುಂದಿನ ದಿನಗಳಲ್ಲಿ ರಾಜಸ್ವ ಕೊರತೆಯನ್ನು ಹೋಗಲಾಡಿಸಿ ರೆವಿನ್ಯೂ ಸರ್ಪ್ಲಸ್ ಬಜೆಟ್ ಮಂಡಿಸುವುದೂ ಕೂಡ ನಮ್ಮ ಧ್ಯೇಯ.
ಇದು ಸರ್ವರ ಬಜೆಟ್. ಹಾಗೆಯೇ ಸರ್ವೋದಯದ ಬಜೆಟ್ ಎಂದು ಮತ್ತೊಮ್ಮೆ ತಮಗೆ ತಿಳಿಸಬಯಸುತ್ತೇನೆ. ನಮ್ಮ ಬಜೆಟ್‌ನಲ್ಲಿ ಈ ಬಾರಿ ಅನೇಕ ಹೊಸ ಕಾರ್ಯಕ್ರಮಗಳನ್ನು ತಂದಿದ್ದೇವೆ. ಪಶುಪಾಲಕರ ಕುರಿ, ಮೇಕೆ, ಎತ್ತು, ಹಸು ಆಕಸ್ಮಿಕವಾಗಿ ಮೃತಪಟ್ಟರೆ ಪರಿಹಾರ ಧನ ಹೆಚ್ಚು ಮಾಡುವುದರಿಂದ ಹಿಡಿದು, ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ತಂದಿದ್ದೇವೆ. ಕೃಷಿ ಕ್ಷೇತ್ರಕ್ಕೆ ಕೊಡಲಾಗಿತ್ತು. ಈ ಬಾರಿ ನಾವು ಸಮಗ್ರ ಕೃಷಿ ಕ್ಷೇತ್ರಕ್ಕೆ 51,339 ಕೋಟಿ ರೂ.ಗಳನ್ನು ಕೊಟ್ಟಿದ್ದೇವೆ.
2022-23 ರಲ್ಲಿ ಮಹಿಳಾ ಅಭಿವೃದ್ಧಿಗೆ 43,188 ಕೋಟಿ ರೂ. ಕೊಡಲಾಗಿತ್ತು. 2025-26 ರಲ್ಲಿ 94,084 ಕೋಟಿ ರೂ. ಕೊಟ್ಟಿದ್ದೇವೆ. ಮಕ್ಕಳ ಬಜೆಟ್ಟಿಗಾಗಿ 2022-23 ರಲ್ಲಿ 40,944 ಕೋಟಿ ರೂ. ಗಳನ್ನು ಕೊಡಲಾಗಿತ್ತು. 2025-26 ರಲ್ಲಿ 62,033 ಕೋಟಿ ರೂ. ಕೊಟ್ಟಿದ್ದೇವೆ. ಇಷ್ಟೆಲ್ಲಾ ಆದ ಮೇಲೂ ನಿಮಗೆ ಬಜೆಟ್ ಬಗ್ಗೆ ಆಕ್ಷೇಪಗಳಿದ್ದರೆ, ಅದು ರಾಜಕೀಯ ಪ್ರೇರಿತವಾದ ಆಕ್ಷೇಪಗಳೇ ಹೊರತು, ಪ್ರಾಮಾಣಿಕ ಅಭಿಪ್ರಾಯಗಳಲ್ಲಿ. ಬಹುಶಃ ಜನರ ಅಭಿಪ್ರಾಯವೂ ಆಗಿರಬಹುದು.
ಕಡೆಯದಾಗಿ ನಿಮ್ಮ ಹಿಂದಿನ ಆಡಳಿತಕ್ಕೆ ಕನ್ನಡಿಯಂತಿರುವ ಬಸವಣ್ಣನವರ ವಚನವನ್ನು ಓದಬೇಕೆಂದೆನಿಸುತ್ತಿದೆ.
ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲುವನರಿಯದೆ ಹೋದಿರಲ್ಲಾ
-ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣ
ಬಸವಣ್ಣನವರು ಬಹುಶಃ ನಿಮ್ಮಂತವರನ್ನು ನೋಡಿಯೇ ಹೀಗೆ ಹೇಳಿದ್ದಾರೆ ಎಂದು ನನಗನಿಸುತ್ತದೆ. ಜೈ ಭೀಮ್ || ಜೈ ಬಾಪು || ಜೈ ಸಂವಿಧಾನ್