ಬೆಳಗಾವಿ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು ಮಹಾದೇವಪ್ಪ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿದರು.
ಮಹಾದೇವಪ್ಪ ಅವರು ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಸುಳೆಭಾವಿ ಗ್ರಾಮದಲ್ಲಿ ಬಸ್ ಹತ್ತಿದ ಯುವಕ ಮತ್ತು ಯುವತಿ ಮರಾಠಿಯಲ್ಲಿ ಮಾತನಾಡಿದ್ದರು. ಆಗ ಮಹಾದೇವಪ್ಪ ಅವರು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡು ಎಂದು ಹೇಳಿದ್ದಕ್ಕೆ ಊರಿನ ಜನರನ್ನು ಕರೆಸಿ 51 ವರ್ಷದ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ಮೇಲೆ ಹಲ್ಲೆ ನಡೆಸಿದ್ದರು.
ನಂತರ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಕಂಡಕ್ಟರ್ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಅವರಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಳೀಯ ಅಧಿಕಾರಿಗಳು ನಿರಂತರವಾಗಿ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ ಎಂದು ತಿಳಿಸಿದರು.