ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕೆಂದು ಬಿಜೆಪಿ ಜೊತೆಗೆ ಕೈಜೋಡಿಸಿರುವ ಜೆಡಿಎಸ್ ಗೆ ಬಿಜೆಪಿ ಏಟು ಎಂಥದ್ದು ಎಂದು ಮುಂದೆ ಗೊತ್ತಾಗಲಿದೆ. ಇವರ ಈ ಅಪಾಯಕಾರಿ ಮೈತ್ರಿಯಿಂದ ಮುಂದೆ ಜೆಡಿಎಸ್ ಪಕ್ಷವೇ ಇರುವುದು ಅನುಮಾನ ಎಂದು ಸಚಿವ ಕೃಷ್ಣ ಭೈರೇಗೌಡ ಎಚ್ಚರಿಸಿದ್ದಾರೆ.
ಬಿಜೆಪಿಯವರು ಅಡ್ಡಡ್ಡ ಏಟು ಹಾಕಿ ಜೆಡಿಎಸ್ ಪಕ್ಷವನ್ನು ನೇತುಹಾಕಿ ಗುಳುಂ ಗುಳುಂ ನುಂಗುತ್ತಾರೆ. ಬಿಜೆಪಿಗೆ ಜೆಡಿಎಸ್ ನ ಕುಮಾರಣ್ಣ ಸರೆಂಡರ್ ಮಾಡಿಬಿಟ್ಟವ್ರೆ. ಯಾಕೆ ಕುಮಾರಣ್ಣ ಹಾಗೆ ಮಾಡಿದ್ರೋ ಗೊತ್ತಾಗ್ತಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ ೯ ಸೀಟು ಬಿಟ್ಟು ಕೊಟ್ಟಿದ್ವಿ. ಈಗ ನೋಡಿದ್ರೆ ಜೆಡಿಎಸ್ ಗೆ ಬರೀ ೩ ಸೀಟೇ ಕೊಟ್ಟವರೆ. ಮೂರು ಕಡೆ ಅವರ ಮೊಮ್ಮಗ, ಮಗ, ಅಳಿಯನೇ ಕ್ಯಾಂಡಿಡೇಟು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ನವರನ್ನ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ಮುಂದೆ ಜೆಡಿಎಸ್ ಇರುತ್ತೋ ಇಲ್ಲವೋ. ಜನತಾ ಪರಿವಾರ, ಜನತಾ ಪಕ್ಷ ಇತ್ತು. ರೈತರ ಹೆಸರಿನಲ್ಲಿ ಜೆಡಿಎಸ್ ನವರು ರಾಜಕೀಯ ಮಾಡಿಕೊಂಡು ಬರುತ್ತಿದ್ದರು. ಅವರ ಪಾರ್ಟಿಯನ್ನ ಉಳಿಸಿಕೊಳ್ಳಬಹುದಾಗಿತ್ತು. ಈ ಹಿಂದೆ ನಮ್ಮ ಜೊತೆ ಮೈತ್ರಿಯಾಗಿದ್ದಾಗ ಜೆಡಿಎಸ್ ಗೆ ೯ ಸ್ಥಾನ ಕೊಟ್ಟಿದ್ದೆವು.
ಬಿಜೆಪಿಯವರು ಈಗ ಅವರಿಗೆ ಪಾಪ ಮೂರು ಕ್ಷೇತ್ರಗಳನ್ನ ಮಾತ್ರ ಕೊಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಯಾರಾಗಿದ್ದಾರೆ ಹೇಳಿ. ಒಂದು ಕಡೆ ಮಗ, ಇನ್ನೊಂದು ಕಡೆ ಮೊಮ್ಮಗ, ಮಗದೊಂದು ಕಡೆ ಅಳಿಯ ಸ್ಪರ್ಧಿಸಿದ್ದಾರೆ. ಇಂದು ಕುಮಾರಸ್ವಾಮಿ ಬಿಜೆಪಿ ಸಹವಾಸ ಮಾಡಿದ್ದಾರೆ. ಕರ್ನಾಟಕದಲ್ಲಿ ಪರ್ಯಾಯವಾಗಿ ಜೆಡಿಎಸ್ ಇತ್ತು. ಈಗ ಬಿಜೆಪಿ ಜೆಡಿಎಸ್ ಪಕ್ಷವನ್ನ ನುಂಗಿ ಹಾಕುತ್ತೆ ಎಂದಿದ್ದಾರೆ.