ಸಚಿವೆ ಆತಿಶಿಯನ್ನು ಎಳೆದಾಡಿದ ದಿಲ್ಲಿ ಪೊಲೀಸರು: ದಿಲ್ಲಿಯಲ್ಲಿ ಕೇಜ್ರಿವಾಲ್‌ ಬಂಧನ ಖಂಡಿಸಿ ಭಾರೀ ಪ್ರತಿಭಟನೆ

Most read

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಹಾಗು ಆಮ್ ಆದ್ಮಿ ಪಾರ್ಟಿಯ ಸರ್ವೋಚ್ಛ ನಾಯಕ ಅರವಿಂದ ಕೇಜ್ರಿವಾಲ್‌ ಬಂಧನ ಖಂಡಿಸಿ ಪಕ್ಷ ಇಂದು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ದಿಲ್ಲಿ ಸರ್ಕಾರದ ಸಚಿವೆ ಆತಿಶಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಬಕಾರಿ ನೀತಿಯಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಟ್ಟ ಅಕ್ರಮ ಹಣ ವರ್ಗಾವಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್‌ ಅವರನ್ನು ನಿನ್ನೆ ರಾತ್ರಿ ಬಂಧಿಸಿತ್ತು.

ದಿಲ್ಲಿಯಲ್ಲಿ ಬಹುದೊಡ್ಡ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆತಿಶಿ, ಸೌರಭ್‌ ಭಾರದ್ವಾಜ್‌ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪೊಲೀಸರು ಹರಸಾಹಸ ಪಡಬೇಕಾಯಿತು. ಆತಿಶಿಯವರನ್ನು ಪೊಲೀಸರು ಬಲವಂತವಾಗಿ ದರದರನೆ ಎಳೆದೊಯ್ಯುವ ದೃಶ್ಯಗಳು ಕಂಡುಬಂದವು.

ಭದ್ರತೆಯ ದೃಷ್ಟಿಯಿಂದ ಪೊಲೀಸರು ಎಎಪಿ ಪ್ರಧಾನ ಕಚೇರಿಗೆ ತೆರಳುವ ಎಲ್ಲ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಎಎಪಿ ತನ್ನೆಲ್ಲ ಪದಾಧಿಕಾರಿಗಳು, ಸಚಿವರು, ಮಹಾನಗರಪಾಲಿಕೆ ಸದಸ್ಯರನ್ನು ಹತ್ತು ಗಂಟೆಯ ವೇಳೆಗೆ ಕಚೇರಿಯಲ್ಲಿರಲು ಆದೇಶಿಸಿತ್ತು.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಹಾಲಿ ಮುಖ್ಯಮಂತ್ರಿಯೇ ಬಂಧನಕ್ಕೊಳಗಾದ ಮೊದಲ ಪ್ರಕರಣ ಇದಾಗಿದ್ದು, ದಿಲ್ಲಿ ಹೈಕೋರ್ಟ್ ತಮ್ಮ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿನ್ನೆ ರಾತ್ರಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಕೇಜ್ರಿವಾಲ್ ಅವರನ್ನು ಬಂಧಿಸಿ ಕರೆದೊಯ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದಿಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಜೈಲಿನಲ್ಲಿದ್ದಾರೆ.

More articles

Latest article