ಬೆಂಗಳೂರು: ಸಾಲ ಕೊಟ್ಟಿದ್ದು 1.60 ಲಕ್ಷ ರೂಪಾಯಿ. ಸಾಲ ಪಡೆದವರು ಮರಳಿಸಿದ್ದು 3.80 ಲಕ್ಷ ರೂ. ಆದರೂ ಮತ್ತಷ್ಟು ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದ ಆರೋಪದಡಿಯಲ್ಲಿ ಖಾಸಗಿ ಫೈನಾನ್ಷಿಯರ್ ದಂಪತಿ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಗಂಗಾಧರ್ ಅವರು ದೂರು ಸಲ್ಲಿಸಿದ್ದಾರೆ.
ಈ ದೂರಿನ ಮೇರೆಗೆ ಶಶೀಂದ್ರಾ ಮತ್ತು ಅಶೋಕ್ ದಂಪತಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ ಮತ್ತು ಅಧಿಕ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿದ್ಧಾಪುರ ಕೆ.ಎಂ.ಕಾಲೊನಿ ನಿವಾಸಿ ಸಮೀನ್ ತಾಜ್ ಎಂಬುವರು ತಮ್ಮ ಸಹೋದರಿಯ ವಿವಾಹಕ್ಕಾಗಿ ತಮ್ಮ ಸಂಬಂಧಿ ಮೊಹಮ್ಮದ್ ರಫೀಕ್ ಅವರ ಸಹಾಯದಿಂದ ಶಶೀಂದ್ರಾ ಅವರಿಂದ 2021ರ ಜುಲೈನಲ್ಲಿ ತಿಂಗಳಿಗೆ ಶೇ. 5 ರ ಬಡ್ಡಿ ದರದಲ್ಲಿ 1.60 ಲಕ್ಷ ಸಾಲ ಪಡೆದುಕೊಂಡಿದ್ದರು. ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದ್ದರು. ಬಳಿಕ ಪ್ರತಿ ತಿಂಗಳು 8 ಸಾವಿರದಂತೆ ಒಂದೂವರೆ ವರ್ಷ ಸುಮಾರು 1.44 ಲಕ್ಷ ಹಣವನ್ನು ಶಶೀಂದ್ರಾಗೆ ಮರಳಿಸಿದ್ದೇವೆ ಎಂದು ಸಮೀನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬಡ್ಡಿ ಕಟ್ಟುವುದು ವಿಳಂಬವಾದಾಗ ಶಶೀಂದ್ರಾ, ಸಮೀನ್‌ಗೆ ಮೊಬೈಲ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಸಮೀನ್ ಅವರು ಶಶೀಂದ್ರಾ ಅವರ ಮನೆಗೆ ಹೋಗಿ ಬಡ್ಡಿ ಕಟ್ಟಲು ಸಾದ್ಯವಾಗುತ್ತಿಲ್ಲ. ಅಸಲು ಹಣವನ್ನು ಮಾತ್ರ ಕಟ್ಟಿ ತೀರಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಶಶೀಂದ್ರಾ ಯಾವುದೇ ಕಾರಣಕ್ಕೂ ಬಡ್ಡಿ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಬಳಿಕ ಸಮೀನ್ ಪ್ರತಿ ತಿಂಗಳು ರೂ. 10 ಸಾವಿರ ಅಸಲು ಮತು ರೂ.5 ಸಾವಿರ ಬಡ್ಡಿ ಸೇರಿ 15 ಸಾವಿರ ರೂಪಾಯಿ ಪಾವತಿಸುವುದಾಗಿ ಒಪ್ಪಿಕೊಂಡಿದ್ದಾರೆ.
ಈ ರೀತಿ ಮೇ, 2024 ರವರೆಗೆ ರೂ. 1.86 ಲಕ್ಷ ಹಣವನ್ನು ಚೆಕ್ ಮೂಲಕ ಮರಳಿಸಿದ್ದಾರೆ. ಟ್ಯಾಕ್ಸ್ ಕಟ್ಟಬೇಕೆಂದು ಮತ್ತೆ 50 ಸಾವಿರ ರೂ. ಪಡೆದುಕೊಂಡಿದ್ದಾರೆ. ಸಂಬಂಧಿ ರಫೀಕ್ ನೀಡಿದ್ದ ಖಾಲಿ ಚೆಕ್ ಅನ್ನು ಶಶೀಂದ್ರಾ ದುರ್ಬಳಕೆ ಮಾಡಿಕೊಂಡು 4 ಲಕ್ಷ ರೂ ಬರೆದುಕೊಂಡು ಬ್ಯಾಂಕ್ ಗೆ ಸಲ್ಲಿಸಿದ್ದು ಅದು ಬೌನ್ಸ್ ಆಗಿದೆ. ಈ ರೀತಿ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುತ್ತಿರುವ ಶಶೀಂದ್ರಾ ಮತ್ತು ಅಶೋಕ್ ದಂಪತಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಅವರಿಗೆ ದೂರು ಸಲ್ಲಿಸಿದ್ದರು. ಅದರಂತೆ ಅವರು ಕ್ರಮ ಜರುಗಿಸಲು ದೂರು ನೀಡಿದ್ದಾರೆ.