ಮೆಟ್ರೋ ಟೈಮ್ಸ್ – 2
ಹರಿಯಾಣಾದ ಗುರುಗ್ರಾಮವೊಂದರಲ್ಲೇ ಜ್ಯೂಸ್ ಸೆಂಟರ್ ಗಳನ್ನಿಟ್ಟುಕೊಂಡಿರುವ ಬ್ಯಾಂಕರ್ ಗಳನ್ನು ನಾನು ಮಾತಾಡಿಸಿದ್ದೇನೆ. ಸಂಜೆಗಳಲ್ಲಿ ಟೀಪಾಯಿ-ಸ್ಟವ್ ಗಳನ್ನಿಟ್ಟುಕೊಂಡು ಕುರುಕಲು ತಿಂಡಿಗಳನ್ನು ಮಾರುತ್ತಿರುವ ಟೆಕ್ಕಿಗಳನ್ನು ನಾನು ಕಂಡಿದ್ದೇನೆ. ಉದ್ಯೋಗ ಮತ್ತು ಸಂಬಳಗಳಿಗೆ ಸೀಮಿತವಾಗಿದ್ದ ಮಧ್ಯಮವರ್ಗದ ಮಂದಿ ಈಗ ಹೊಸ ಮಹಾತ್ವಾಕಾಂಕ್ಷೆಗಳಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿರುವುದು ಮಹಾನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಮನಾರ್ಹ ಬೆಳವಣಿಗೆಗಳಲ್ಲೊಂದು- ʼಮೆಟ್ರೋ ಟೈಮ್ಸ್ʼ ಅಂಕಣದಲ್ಲಿ ಪ್ರಸಾದ್ ನಾಯ್ಕ್, ದೆಹಲಿ.
ಮಹಾನಗರಗಳಿಗೂ ಮಹತ್ವಾಕಾಂಕ್ಷೆಗೂ ಇರುವ ನೇರ ಸಂಬಂಧದ ಬಗ್ಗೆ ನನಗೆ ತಿಳಿದಿದ್ದು ಸಾಕಷ್ಟು ತಡವಾಗಿಯೇ!
ಆಗೆಲ್ಲ ನಾನು ಆತ್ಮಕಥನಗಳನ್ನು ಮುಗಿಬಿದ್ದು ಓದುತ್ತಿದ್ದೆ. ಅದರಲ್ಲೂ ವಿಕ್ಷಿಪ್ತರಂತೆ ಟ್ಯಾಬ್ಲಾಯ್ಡುಗಳಲ್ಲಿ ಮೂಡಿಬರುತ್ತಿದ್ದ ಟಿವಿ ಸೆಲೆಬ್ರಿಟಿಗಳೆಂದರೆ ಅದೇನೋ ಕುತೂಹಲ. ಯಾವುದೋ ಐರೋಪ್ಯ ದೇಶ, ಯುದ್ಧಕಾಲ ಅಂತೆಲ್ಲ ಆರಂಭವಾಗುತ್ತಿದ್ದ ಕಥನಗಳು ನಿಧಾನವಾಗಿ ನ್ಯೂಯಾರ್ಕಿನತ್ತ ಹೊರಳುತ್ತಿದ್ದವು. ಎಲ್ಲಾ ದಾರಿಗಳು ಅದ್ಹೇಗೆ ಈ ನ್ಯೂಯಾರ್ಕ್ ನಲ್ಲಿ ಅಂತ್ಯವಾಗುವುದು ಎಂದು ನಾನಾಗ ತಲೆಕೆಡಿಸಿಕೊಳ್ಳುತ್ತಿದ್ದೆ. ಆದರೆ ಹೀಗೆ ಬಂದವರಿಗೆ ನ್ಯೂಯಾರ್ಕ್ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆಯುವುದು, ಕ್ರಮೇಣ ಇವರಿಗೆ ಅಭೂತಪೂರ್ವ ಯಶಸ್ಸು ಸಾಧ್ಯವಾಗುವುದು… ಹೀಗೆ ಕತೆಗಳು ರೋಚಕವಾಗಿ ಸಾಗುತ್ತಿದ್ದವು. ಒಟ್ಟಿನಲ್ಲಿ ನ್ಯೂಯಾರ್ಕಿಗೆ ಬಂದಿಳಿದರೆ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ, ದೊಡ್ಡ ಕನಸುಗಳೆಲ್ಲ ನನಸಾಗುತ್ತವೆ ಎನ್ನುವಂತೆ ಪುಟಗಳಲ್ಲೇ ಜಗಸಂಚಾರ ಮಾಡುತ್ತಿದ್ದ ದಿನಗಳವು.
ಅಂದಹಾಗೆ ನ್ಯೂಯಾರ್ಕ್ ನಗರಿಯ ತದ್ರೂಪೊಂದು ನಮ್ಮ ಪಕ್ಕದಲ್ಲೇ ಇತ್ತು. ಅದರ ಹೆಸರು ಮುಂಬೈ. ನಮ್ಮ ಕರಾವಳಿಯವರಿಗೂ, ಮುಂಬೈ ಮಹಾನಗರಕ್ಕೂ ಇರುವ ನಂಟು ಹಳೆಯದ್ದು. “ಅವರು ಕ್ಲೀನರ್ ಆಗಿದ್ರು, ನಂತರ ಕ್ಯಾಶಿಯರ್ ಆದ್ರು. ಈಗ ಅವರದ್ದೇ ಹೋಟ್ಲು ಬಾಂಬೆಯಲ್ಲಿ. ಭಯಂಕರ ಬ್ಯುಸಿನೆಸ್ಸ್ ಅಂತೆ ಮಾರ್ರೆ…”, ಈ ಧಾಟಿಯ ಕತೆಗಳನ್ನು ನಾವೆಲ್ಲಾ ಸಾಕಷ್ಟು ಕೇಳಿದ್ದಿದೆ. ಸಹಜವಾಗಿ ಮುಂಬೈ ಶಹರಕ್ಕೆ ತಾರಾ ಮೆರುಗಿತ್ತು. ಇನ್ನು ಈ ಮೆರುಗಿನೊಂದಿಗೆ ಅಂಟಿಕೊಂಡಿದ್ದ ಭೂಗತಲೋಕದ ಕ್ರೈಂ ಸುದ್ದಿಗಳು ಇದಕ್ಕೆ ಮತ್ತಷ್ಟು ರೋಚಕತೆಯನ್ನು ತುಂಬುತ್ತಿದ್ದವು. ಶಾರೂಖ್ ಖಾನನ ಏರುತ್ತಿದ್ದ ಗ್ರಾಫ್ ಒಂದು ಕತೆಯನ್ನು ಹೇಳುತ್ತಿದ್ದರೆ, ಸಂಜಯ್ ದತ್ ನ ಮಣ್ಣುಮುಕ್ಕುತ್ತಿದ್ದ ಗ್ರಾಫ್ ಬೇರೇನನ್ನೋ ಹೇಳುತ್ತಿತ್ತು. ನಾಲ್ಕು ಪುಸ್ತಕ ಓದಿ, ಹತ್ತು ಬೀದಿ ಸುತ್ತಿಕೊಂಡು ಈ ಜಾಗದ ಬಗ್ಗೆ ನಮಗೆಲ್ಲಾ ಗೊತ್ತಾಯಿತು ಅಂದುಕೊಳ್ಳುತ್ತೇವೆ. ಆದರೆ ಅದು ಹಾಗಲ್ಲ ಎಂಬುದನ್ನು ಮುಂಬೈ ನಿರಂತರವಾಗಿ ಸಾಬೀತುಪಡಿಸುತ್ತಲೇ ಬಂದಿದೆ.
ಹಾಗೆ ನೋಡಿದರೆ ಇದು ನ್ಯೂಯಾರ್ಕ್ ಅಥವಾ ಮುಂಬೈ ಅಂತಲ್ಲ. ಬಹುತೇಕ ಎಲ್ಲಾ ಮಹಾನಗರಗಳ ವಿಚಾರದಲ್ಲೂ ಇದು ಸತ್ಯ. ಕನಸುಗಳ ಬುತ್ತಿಯನ್ನು ಕಾಪಿಟ್ಟು ಬಂದವರನ್ನು ಮತ್ತು ಅದನ್ನು ನನಸು ಮಾಡಿಕೊಳ್ಳಲು ನಿರಂತರ ಶ್ರಮಿಸುವವರನ್ನು ಮಹಾನಗರ ಯಾವತ್ತೂ ಕೈಬಿಡುವುದಿಲ್ಲ. ಇತ್ತೀಚೆಗೆ ನಾನು ಪ್ರಯಾಣಿಸುತ್ತಿದ್ದ ಕ್ಯಾಬ್ ಒಂದರ ಚಾಲಕನನ್ನು ಲೋಕಾಭಿರಾಮಕ್ಕೆಂದು ಮಾತಾಡಿಸಿದ್ದೆ. ತೆಳ್ಳಗೆ, ಬೆಳ್ಳಗಿದ್ದು ಕುರುಚಲು ಗಡ್ಡವನ್ನಿಟ್ಟುಕೊಂಡಿದ್ದ ಆ ತರುಣ ನೋಡಲು ಮಧ್ಯಪ್ರಾಚ್ಯ ಮೂಲದ ನಾಗರಿಕನಂತೆ ಕಾಣುತ್ತಿದ್ದ. ಸುಮಾರು ಇಪ್ಪತ್ತೈದರ ವಯಸ್ಸಿರಬಹುದು ಅವನಿಗೆ. ತಾನು ಸಮಯ ಕಳೆಯಲಷ್ಟೇ ಡ್ರೈವಿಂಗ್ ಮಾಡುತ್ತೇನೆ ಎಂದು ಹೇಳಿಕೊಂಡ. ಅವನ ಹಲವು ಅವತಾರಗಳಲ್ಲಿ ಇದೂ ಒಂದಂತೆ.
ನಾನು ಕೂತಿದ್ದ ಹಿಂಬದಿಯ ಸೀಟಿನಲ್ಲಿ ವೆಬ್ ಸೈಟ್ ಲಿಂಕ್ ಒಂದನ್ನು ಡಿಜಿಟಲ್ ಪೇಮೆಂಟ್ ಕ್ಯೂ ಆರ್ ಕೋಡ್ ಜೊತೆ ನಮೂದಿಸಲಾಗಿತ್ತು. ಇದ್ಯಾರದಪ್ಪಾ ವೆಬ್-ಸೈಟ್ ಎಂದು ಕೇಳಿದ್ದಕ್ಕೆ ಅದು ತನ್ನದೇ ಬ್ಲಾಗ್ ಎಂದು ಹೇಳಿಕೊಂಡ. ಆತ ಕೆಲ ಕಾಲ ರೇಡಿಯೋ ಸ್ಟೇಷನ್ ಒಂದರಲ್ಲಿ ಕೆಲಸ ಮಾಡಿದ್ದಲ್ಲದೆ, ಒಂದು ಅಂತಾರಾಷ್ಟ್ರೀಯ ಮಾಡೆಲಿಂಗ್ ಏಜೆನ್ಸಿಯೊಂದಿಗೂ ಗುರುತಿಸಿಕೊಂಡಿದ್ದನಂತೆ. ಆತನ ಬಹುತೇಕ ಕೆಲಸಗಳು ಫ್ರೀಲ್ಯಾನ್ಸ್ ಮತ್ತು ಆನ್ಲೈನ್ ಮೋಡಿನಲ್ಲಿ ನಡೆಯುತ್ತಿದ್ದರಿಂದ ಸಾಕಷ್ಟು ದುಡ್ಡೂ, ಸಮಯವೂ ಉಳಿಯುತ್ತಿತ್ತು. ಸಾಮಾನ್ಯವಾಗಿ ಇಂಥಾ ಬಿಡುವಿನ ಅವಧಿಯಲ್ಲಿ ಹೊಸ ಕೌಶಲಗಳನ್ನು ಕಲಿತು, ಅವುಗಳನ್ನು ಬೇರೆಯವರಿಗೂ ಕಲಿಸುತ್ತಾ ಸಾಕಷ್ಟು ಸಂಪಾದಿಸುತ್ತೇನೆ ಎಂದು ಹೇಳುತ್ತಲೇ ಹೋದ ನಮ್ಮ ಕಥಾನಾಯಕ.
“ನೋಡಿ ಸಾರ್… ನಾನು ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದೇನೆ. ಎಲ್ಲೆಲ್ಲೋ ಈಜಾಡಿದ್ದೇನೆ. ಹಲವು ಜಗತ್ತಿನ ಆಳ-ಅಗಲಗಳನ್ನು ಸ್ವತಃ ಪರೀಕ್ಷಿಸಿದ್ದೇನೆ. ಬದುಕು ಒಂಥರಾ ಮಜವಾಗಿದೆ”, ಅಂತೆಲ್ಲಾ ಹೇಳುತ್ತಿದ್ದ ಆತನಲ್ಲಿ ಒಂದು ವಿಶಿಷ್ಟವಾದ ಆತ್ಮವಿಶ್ವಾಸವಿತ್ತು. ಒಂದು ಹಂತದಲ್ಲಿ ಒಳ್ಳೆಯ ಮಾತುಗಾರನಂತೆ ಅನಿಸಿದರೂ ಮತ್ತೊಂದು ಘಳಿಗೆಯಲ್ಲಿ ವಾಚಾಳಿಯಂತೆ ಬದಲಾಗುವಷ್ಟು ವಯೋಸಹಜ ಚಂಚಲತೆಯೂ ಅವನಲ್ಲಿತ್ತು. ಇನ್ನೊಂದು ವಾರದಲ್ಲಿ ಆತ ವಿಯೆಟ್ನಾಮಿಗೆ ಬೇರೆ ಹೊರಡಲಿದ್ದ. ವಿಯೆಟ್ನಾಮಿನಲ್ಲಿದ್ದ ಅವನ ಪ್ರೇಯಸಿ ಅವನಿಗಾಗಿ ಕಾಯುತ್ತಿದ್ದಾಳಂತೆ.
ಮೊದಲೇ ಹೇಳಿರುವಂತೆ ಚಿಕ್ಕ ಪ್ರದೇಶಗಳಿಂದ ವಲಸಿಗರಾಗಿ ಬರುವ ಹಲವರು ಮಹಾನಗರಗಳನ್ನು ತಮ್ಮ ಪ್ರಯೋಗಶಾಲೆಗಳನ್ನಾಗಿಸಿಕೊಂಡು ನಿರಂತರವಾಗಿ ಬೆಳೆಯುತ್ತಿರುವುದು ಹೊಸ ಸಂಗತಿಯೇನಲ್ಲ. ಅದರಲ್ಲೂ ವಿಶೇಷವಾಗಿ ತಿಂಗಳ ಕೊನೆಯಲ್ಲಿ ನಿಯಮಿತವಾಗಿ ಸಂಬಳವನ್ನು ಪಡೆಯುತ್ತಿರುವ ಯುವ ಉದ್ಯೋಗಿಗಳು, ಚಿಕ್ಕಪುಟ್ಟ ಉದ್ಯಮಗಳನ್ನು ಆರಂಭಿಸುವ ಸಾಹಸಗಳಿಗೆ ಕೈಹಾಕುತ್ತಿರುವುದು ಕೋವಿಡ್ ಕಾಲಾನಂತರದ ಹೊಸ ಟ್ರೆಂಡ್. ಹರಿಯಾಣಾದ ಗುರುಗ್ರಾಮವೊಂದರಲ್ಲೇ ಜ್ಯೂಸ್ ಸೆಂಟರ್ ಗಳನ್ನಿಟ್ಟುಕೊಂಡಿರುವ ಬ್ಯಾಂಕರ್ ಗಳನ್ನು ನಾನು ಮಾತಾಡಿಸಿದ್ದೇನೆ. ಸಂಜೆಗಳಲ್ಲಿ ಟೀಪಾಯಿ-ಸ್ಟವ್ ಗಳನ್ನಿಟ್ಟುಕೊಂಡು ಕುರುಕಲು ತಿಂಡಿಗಳನ್ನು ಮಾರುತ್ತಿರುವ ಟೆಕ್ಕಿಗಳನ್ನು ನಾನು ಕಂಡಿದ್ದೇನೆ. ಉದ್ಯೋಗ ಮತ್ತು ಸಂಬಳಗಳಿಗೆ ಸೀಮಿತವಾಗಿದ್ದ ಮಧ್ಯಮವರ್ಗದ ಮಂದಿ ಈಗ ಹೊಸ ಮಹಾತ್ವಾಕಾಂಕ್ಷೆಗಳಿಗೆ ನಿಧಾನವಾಗಿ ತೆರೆದುಕೊಳ್ಳುತ್ತಿರುವುದು ಮಹಾನಗರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಮನಾರ್ಹ ಬೆಳವಣಿಗೆಗಳಲ್ಲೊಂದು.
ಗುವಾಹಟಿಯ ಗಣೇಶಗುಡಿ ಏರಿಯಾದಲ್ಲಿರುವ ಮುಖ್ಯ ಪಾಯಿಂಟ್ ಒಂದರಲ್ಲಿ ಸಂಜೆ ಕಾಲಿಡಲೂ ಆಗದಷ್ಟು ಜನಸಂದಣಿ. ಅಲ್ಲೊಬ್ಬ “ಗ್ರಾಜುಯೇಟ್ ಚಾಯ್ ವಾಲಾ” ಎಂಬ ಬೋರ್ಡ್ ಹಾಕಿಕೊಂಡು ಪುಟ್ಟ ಟೀ ಸ್ಟಾಲ್ ಒಂದನ್ನಿಟ್ಟುಕೊಂಡಿದ್ದಾನೆ. ಮದುವೆ ಮನೆಗಳಲ್ಲಿ ದೊಡ್ಡ ಕಡಾಯಿಯಲ್ಲಿ ಸಾಂಬಾರು ಸಿದ್ಧಪಡಿಸುವಂತೆ ಈತ ಅಗಲ ಕಾವಲಿಯಂತಿರುವ, ಆದರೆ ಕೊಂಚ ಆಳವೂ ಇರುವ ದೊಡ್ಡ ಪಾತ್ರೆಯೊಂದರಲ್ಲಿ ಟೀ ಸಿದ್ಧಪಡಿಸುತ್ತಾನೆ. ಸುಲಭವಾಗಿ ನೀಡಲಾಗುವ ಡಿಪ್ ಟೀ ಅನ್ನೇ ಕುಡಿಸುವ ಈಗಿನ ಬಹುಸಂಖ್ಯಾತರ ಮಧ್ಯದಲ್ಲಿ ಈತ ಓರ್ವ ಅಪವಾದ. ಆ ಮಟ್ಟಿಗೆ ಕುದಿಸುವುದಕ್ಕೋ ಏನೋ, ಅವನ ಚಹಾ ಮಸಾಲೆಗಳನ್ನೆಲ್ಲಾ ತನ್ನೊಳಗೆ ಸಂಪೂರ್ಣವಾಗಿ ಇಳಿಸಿಕೊಂಡು ವಿಶಿಷ್ಟ ಘಮ ಮತ್ತು ರುಚಿಯೊಂದಿಗೆ ಸಿದ್ಧವಾಗಿರುತ್ತದೆ. ಇತ್ತ ಗ್ರಾಹಕರು ಕೂಡ ಕಾದರೂ ನಷ್ಟವಿಲ್ಲ ಎಂದು ಹಾಯಾಗಿರುವಂತೆ ನಮಗೆ ಕಾಣುತ್ತಾರೆ.
ಇತ್ತ ಟೀ ಸಿದ್ಧವಾಗುತ್ತಿರುವಂತೆ ಅವನ ಓಪನ್ ಸ್ಟಾಲಿನ ಮೂಲೆಯಲ್ಲಿ ಕೂತಿರುವ ಸ್ಮಾರ್ಟ್‍ಫೋನ್ ಹಿಂದಿ ಮತ್ತು ಅಸ್ಸಾಮೀಸ್ ಹಾಡುಗಳನ್ನು ಹೊರಹೊಮ್ಮಿಸುತ್ತದೆ. ಇದರೊಂದಿಗೆ ದೊಡ್ಡ ಸೌಟೊಂದನ್ನು ಚಹಾ ಮಿಶ್ರಣದಲ್ಲಿ ಮೇಲಕ್ಕೂ, ಕೆಳಕ್ಕೂ ಆಡಿಸುತ್ತಾ ಇವನೂ ಮೈಮರೆತು ಹಾಡುತ್ತಾನೆ. ಕೈ-ಕಾಲು ಕುಣಿಸುತ್ತಾನೆ. ಹೀಗೆ ಸುತ್ತಮುತ್ತ ಅಷ್ಟು ಸ್ಟಾಲ್ ಗಳಿದ್ದರೂ ಈ ಚಾಯ್ ವಾಲಾ ಗುಂಪಿನಲ್ಲೂ ಎದ್ದು ಕಾಣುತ್ತಾನೆ. ಇಲ್ಲಿಗೆ ಬರುವ ಮಂದಿ ಚಹಾ ಸವಿಯುವುದಲ್ಲದೆ ಈತನ ವೀಡಿಯೋ ಮಾಡುತ್ತಾರೆ. ಅವನ ಗೀತೆಗಳನ್ನು, ಭಂಗಿಗಳನ್ನು ರೀಲ್ಸ್ ಮಾಡುತ್ತಾರೆ. ವ್ಯವಹಾರ ಮತ್ತು ಪ್ರಚಾರಗಳು ಏಕಕಾಲದಲ್ಲಿ ಮುಂದಕ್ಕೆ ಸಾಗುತ್ತವೆ. ಹೀಗೆ ಅಂಗೈ ಅಗಲದಷ್ಟಿನ ಈ ಚಿಕ್ಕದೊಂದು ಸ್ಥಳವು ಕೆಲವೇ ಕೆಲವು (ಬಾಲಿಶ) ಪ್ರಯತ್ನಗಳಿಂದಾಗಿ ನಗರದ ಕೂಲ್ ಫುಡ್ ಜಾಯಿಂಟ್ ಆಗಿ ಬದಲಾಗುತ್ತದೆ.
ದಿಲ್ಲಿಯ ಕನ್ನಾಟ್ ಪ್ಲೇಸ್ ನಲ್ಲೂ ಈ ಬಗೆಯ ಹಲವು ಉತ್ಸಾಹಿಗಳು ನಮಗೆ ಆಗಾಗ ಸಿಗುವುದುಂಟು. ಸುಮ್ಮನೆ ಮೂಲೆಯಲ್ಲಿ ಕುಳಿತು ಗಿಟಾರಿನೊಂದಿಗೆ ಹಾಡುತ್ತಿರುವವರು. ಚಿಕ್ಕ ಆಡಿಯೋ ಡಿವೈಸ್ ಗಳನ್ನಿಟ್ಟುಕೊಂಡು, ವೃತ್ತಾಕಾರದ ಜಾಗವೊಂದನ್ನು ಹೇಗೋ ಮಾಡಿಕೊಂಡು ಹಿಪ್-ಹಾಪ್ ಕುಣಿಯುವವರು. ಜನಜಂಗುಳಿಯ ನಡುವಿನಲ್ಲೂ ಕ್ಯಾನ್ವಾಸೊಂದನ್ನು ಹಾಕಿ ಸುತ್ತಲಿನ ಮಹಾನಗರದ ದೃಶ್ಯಗಳನ್ನು ವರ್ಣಚಿತ್ರದ ರೂಪದಲ್ಲಿ ಇಳಿಸುವವರು… ಹೀಗೆ ಹತ್ತಾರು ವೈವಿಧ್ಯಗಳು. ಕಟ್ಟಿರುವೆಗಳಂತೆ ತಮ್ಮ ಪಾಡಿಗೆ ಸಾಗುತ್ತಿರುವ ಮಂದಿ ಒಂದರೆಕ್ಷಣ ನಿಂತು ಆ ಕ್ಷಣವನ್ನು ಆಸ್ವಾದಿಸಲು ಹತ್ತಾರು ಕಾರಣಗಳು. ಹಲವರಿಗದು ಹೊಟ್ಟೆಪಾಡಾದರೆ, ಇನ್ನು ಕೆಲವರಿಗೆ ಕಾಲಹರಣ. ಕೆಲವರಿಗೆ ಅನಿವಾರ್ಯತೆಯಾದರೆ, ಉಳಿದವರಿಗೆ ಹೊಸದಾಗಿ ಏನೋ ಹೊಸದೊಂದು ಪ್ರಯೋಗ ಮಾಡುವ ಹುಮ್ಮಸ್ಸು.
ಆದರೆ ಈ ವೈವಿಧ್ಯಗಳ ಆಯುಷ್ಯವೂ ಅಷ್ಟಕ್ಕಷ್ಟೇ. ಏಕೆಂದರೆ ಇಲ್ಲಿ ವೇಷಗಳು ಬದಲಾಗುತ್ತಲೇ ಇರಬೇಕು. ಬದಲಾಗುವುದಷ್ಟೇ ಮುಖ್ಯವಲ್ಲ. ಅದು ವೇಗವಾಗಿಯೂ ಆಗಬೇಕು. ನಾವು ಒಂದನ್ನು ಸಂಪೂರ್ಣವಾಗಿ ಆಸ್ವಾದಿಸುವಷ್ಟರಲ್ಲಿ ಮತ್ತೊಂದು ಬಂದಾಗಿರುತ್ತದೆ. ಅಲ್ಲಿಗೆ ಹಿಂದಿನದು ಹಳತು. ನಾವು ಯೋಜನೆಗಳನ್ನು ಸಾವಧಾನವಾಗಿ ಹೆಣೆಯುವಷ್ಟರಲ್ಲಿ ಮತ್ಯಾರೋ ಬಂದು ಆ ಐಡಿಯಾಗಳೊಂದಿಗೆ ಆಟವಾಡಿ ಗೆದ್ದೋ, ಬಿದ್ದೋ ಹೋಗಿಯಾಗಿರುತ್ತದೆ. ಹೀಗಾಗಿ ಕನಸಷ್ಟೇ ಮುಖ್ಯವಲ್ಲ. ದೂರದೃಷ್ಟಿಯೂ ಬೇಕು. ನಿಧಾನವೇ ಪ್ರಧಾನವೆಂಬ ನಿಯಮಗಳು ಇಲ್ಲಿ ಅನ್ವಯಿಸುವುದಿಲ್ಲ. ಈ ಕಾರಣದಿಂದಾಗಿಯೂ ಇಲ್ಲಿ ಬದುಕೊಂದು ನಿಲ್ಲದ ಓಟ!
ಅಷ್ಟಕ್ಕೂ ಈಗ ಕನಸುಗಳು ವ್ಯಕ್ತಿಯೊಬ್ಬನ ಪಾಲಾಗಿ ಮಾತ್ರ ಉಳಿದಿಲ್ಲ. ನಮ್ಮ ಹಳ್ಳಿಗಳು ಸಿಟಿಗಳಾದರೆ ಮಾತ್ರ ಸಾಲದು. ಸ್ಮಾರ್ಟ್‍ಸಿಟಿಗಳೂ ಆಗಬೇಕು ಎಂಬ ಹೊಸ ಕನಸೊಂದನ್ನು ಈಗ ಢಾಳಾಗಿ ಬಿತ್ತಲಾಗುತ್ತಿದೆ. ಆದರೆ ಸ್ಮಾರ್ಟ್ ಸಿಟಿಗಳೆಂದರೇನು ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆಯಿದ್ದಂತಿಲ್ಲ ಎಂಬುದು ಬೇರೆ ಮಾತು. ಇನ್ನು ತಮ್ಮನ್ನು ತಾವು ಸ್ಮಾರ್ಟ್ ಎಂದು ಕರೆದುಕೊಳ್ಳುತ್ತಿರುವ ಮಹಾನಗರಗಳು ಅದ್ಯಾವ ರೀತಿಯಲ್ಲಿ ಸ್ಮಾರ್ಟ್ ಎಂಬುದನ್ನು ಕೂಡ ಈ “ಸ್ಮಾರ್ಟ್” ಮಂದಿಯೇ ಹೇಳಬೇಕು. ಅದೇನೇ ಇರಲಿ. ಇಂದು ನಮ್ಮ ಪುಟ್ಟ ಗ್ರಾಮಗಳಿಗೆ ನಾವು ಸ್ಮಾರ್ಟ್ ಸಿಟಿಯ ಕನಸುಗಳನ್ನು ಹೇರುತ್ತಿದ್ದೇವೆ ಎಂದಾದಲ್ಲಿ, ನಮ್ಮ ಸದ್ಯದ ಮಹಾನಗರಗಳು ನಗರೀಕರಣದ ಗರಿಷ್ಠಮಟ್ಟವನ್ನು ತಲುಪಿ ಆಗಲೇ ಕೈಚೆಲ್ಲಿ ಕೂತಿವೆ ಅಂದಹಾಗೂ ಆಯಿತಲ್ಲ!
ಮಹಾತ್ವಾಕಾಂಕ್ಷೆಯ ಕನಸು ಈಗ ಮಹಾಜನಗಳಿಗಷ್ಟೇ ಸೀಮಿತವಲ್ಲ. ಮಹಾನಗರಗಳಾಗಲು ಹಂಬಲಿಸುತ್ತಿರುವ ನಮ್ಮ ಗ್ರಾಮಗಳಿಗೂ ಬಂದಾಗಿದೆ!
ಪ್ರಸಾದ್ ನಾಯ್ಕ್
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.