“ಸಂಗಾತ-ಸಂಘರ್ಷಗಳ ನಡುವೆ”

Most read

ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ ಆಷಾಢಭೂತಿತನವಷ್ಟೇ – ಪ್ರಸಾದ್‌ ನಾಯ್ಕ್‌, ದೆಹಲಿ.

ಭಾಷೆಗಳ ಬಗ್ಗೆ ಆಸಕ್ತಿಯಿರುವವರಿಗೆ ಆಯಾ ಭಾಷೆಗಳಲ್ಲಿ ಬಂದುಹೋಗುವ ಹೊಸ ಪದಗಳ ಬಗ್ಗೆಯೂ ಆಸಕ್ತಿಯಿರುವುದು ಸಹಜ. ಇತ್ತೀಚೆಗೆ ಪರಿಚಿತರೊಬ್ಬರ ಜೊತೆ ಈ ಬಗ್ಗೆ ಮಾತಾಡುತ್ತಿದ್ದಾಗ ಕಳೆದ ಒಂದು ದಶಕದಲ್ಲಿ ಅತೀ ಹೆಚ್ಚು ದುರ್ಬಳಕೆಗೊಳಗಾದ ಪದಗಳು ಯಾವುದಿರಬಹುದು ಎಂಬ ಚರ್ಚೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಹಲವು ಮಂದಿ ತಮ್ಮ ಆಸಕ್ತಿಯ ಕ್ಷೇತ್ರಗಳಿಗನುಗುಣವಾಗಿ ಕೆಲವು ಪದಗಳನ್ನು ಹೆಸರಿಸಿದ್ದರು. ವೈದ್ಯರೊಬ್ಬರು “ಡಿಪ್ರೆಷನ್” ಪದವನ್ನು ಹೆಸರಿಸಿದರೆ, ರಾಜಕೀಯ ಆಸಕ್ತಿಯುಳ್ಳ ಮಿತ್ರರೊಬ್ಬರು “ಇಂಟಲೆಕ್ಚುವಲ್” ಪದವನ್ನು ಉಲ್ಲೇಖಿಸಿದ್ದರು. ಈ ಮಧ್ಯೆ “ಫೆಮಿನಿಸಂ” ಎಂಬ ಪದವೂ ಮತ್ತೊಬ್ಬರಿಂದ ಅನುಮೋದಿಸಲ್ಪಟ್ಟಿತ್ತು. ಈ ತೂಕದ ಪದಗಳನ್ನು, ಸೂಕ್ತ ಸಂದರ್ಭ-ಹಿನ್ನೆಲೆಗಳಿಲ್ಲದೆ ಮನಬಂದಂತೆ ಬಳಸಿ ಇವುಗಳ ನಿಜವಾದ ಅರ್ಥಗಳು ಮಣ್ಣುಪಾಲಾಗಿ ಬಿಟ್ಟಿವೆ ಎಂಬುದು ಇವರ ವಾದ.

ಇವುಗಳನ್ನು ಹೊರತಾಗಿಸಿಯೂ ಫೆಮಿನಿಸಂ ಅಥವಾ ಸ್ತ್ರೀವಾದದ ಪರಿಕಲ್ಪನೆಗಳು ಕಾಲಾನುಕ್ರಮದಲ್ಲಿ ತಮ್ಮದೇ ಆದ ರೀತಿಯಲ್ಲಿ ಬದಲಾವಣೆಗೊಳಪಟ್ಟಿವೆ ಎಂಬುದನ್ನು ಹೇಳಲೇಬೇಕಾಗುತ್ತದೆ. ಇದಕ್ಕೆ ಆಧುನಿಕತೆ, ಬಂಡವಾಳಶಾಹಿ ಮಾರುಕಟ್ಟೆ, ವಲಸೆ, ಜಾಗತೀಕರಣ… ಹೀಗೆ ಹಲವು ಕಾರಣಗಳತ್ತ ಮೇಲ್ನೋಟಕ್ಕೆ ಬೊಟ್ಟು ಮಾಡಿ ತೋರಿಸಬಹುದು. ಅಥವಾ ಜಗತ್ತಿನ ಎಲ್ಲಾ ಸಂಗತಿಗಳಂತೆ ಇದೂ ಕೂಡ ನಿರಂತರವಾಗಿ ಬದಲಾಗುತ್ತಿರುವ ಒಂದು ಪರಿಕಲ್ಪನೆಯಷ್ಟೇ ಎಂದು ತಣ್ಣಗೆ ಕೂರಬಹುದು. ಆದರೆ ಅಕಾಡೆಮಿಕ್ ಆಗಿ ಕೇಳಿಬರುವ ಸ್ತ್ರೀವಾದಕ್ಕೂ, ಜನಪ್ರಿಯ ನೆಲೆಯಲ್ಲಿ (ಪಾಪ್ ಕಲ್ಚರ್) ವಿಕಸಿತಗೊಂಡು ಸ್ತ್ರೀವಾದದ ಮುಖವಾಡವಿಟ್ಟುಕೊಂಡು ಮುಂದಿಡಲಾಗುತ್ತಿರುವ ಸ್ತ್ರೀಕೇಂದ್ರಿತ ವಾದಗಳಿಗೂ ಮತ್ತು ಈ ಹಣೆಪಟ್ಟಿಗಳಾಚೆಗೂ ಹೂವು ಅರಳುವಂತೆ ಸಹಜವಾಗಿ ಅರಳಿ, ನಳನಳಿಸುತ್ತಿರುವ ಕೆಲ ಹೆಣ್ಣುಮಕ್ಕಳ ಜಗತ್ತಿಗೂ ಸಾಕಷ್ಟು ವ್ಯತ್ಯಾಸಗಳಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಹಲವಾರು ಪದಗಳಂತೆ “ಫೆಮಿನಿಸಂ” ಪದವೂ ಆಯಾ ಅನುಕೂಲತೆಗಳಿಗೆ ತಕ್ಕಂತೆ ಸಾಕಷ್ಟು ತಿರುಚಲ್ಪಟ್ಟಿದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ.

ಚಿತ್ರ ಕೃಪೆ: ವಾಟ್ಸ್ಯಾಪ್

ಇನ್ನು ಸ್ತ್ರೀವಾದದ ಬಗ್ಗೆ ಮಾತಾಡುವಾಗ ಜೊತೆಗೇ ಬರುವ ಮತ್ತೊಂದು ಸಂಗತಿಯೆಂದರೆ ಲಿಂಗ ಸಮಾನತೆ. ಸಾಮಾಜಿಕ ನೆಲೆಗಟ್ಟಿನಲ್ಲಿ ಹೇಳಲಾಗಿರುವ ಗಂಡು ಮತ್ತು ಹೆಣ್ಣು ಸಮಾನರೆಂಬ ಮಾತು ಈಗ ಕ್ಲೀಷೆಯೆಂಬಷ್ಟು ಹಳತಾಗಿ ದಶಕಗಳೇ ಕಳೆದಿವೆ. ಹಾಗಿದ್ದರೂ ನಾವು ಇದನ್ನು ನಿಜಕ್ಕೂ ಮನಸಾರೆ ಒಪ್ಪಿಕೊಂಡಿದ್ದೇವೆಯೇ ಎಂಬುದು ಬೇರೆ ಮಾತು. ಎಲ್ಲರೆದುರು ಪೊಲಿಟಿಕಲಿ ಕರೆಕ್ಟ್ ಆಗಲು ಹೌದು ಎಂದರೆ ಸಾಕು. ಇಲ್ಲವೆಂದಾದರೆ ಅದ್ಯಾಕೆ ಹಾಗೆ ಎಂಬುದನ್ನೂ ವಿಶ್ಲೇಷಿಸಬೇಕಾಗುತ್ತದೆ. ಈ ಪ್ರಶ್ನೆಯು ನನ್ನನ್ನು ಹಲವು ದಿಕ್ಕುಗಳತ್ತ ನೋಡುವಂತೆ ಮಾಡಿರುವುದು ಎಷ್ಟು ಸತ್ಯವೋ, ಉತ್ತರಕ್ಕಾಗಿ ಹುಡುಕಾಟವು ಇನ್ನೂ ಜಾರಿಯಲ್ಲಿದೆ ಎಂಬುದೂ ಅಷ್ಟೇ ಸತ್ಯ.

ಒಮ್ಮೆ ಹೀಗಾಯಿತು. ಇಂದಿನ ಆಧುನಿಕ ಯುಗದಲ್ಲಿ ಸಂಗಾತಿಯನ್ನು ಹುಡುಕುವುದು ಅದೆಷ್ಟು ಕಷ್ಟವೆಂದು ಓರ್ವ ಪುರುಷನೊಬ್ಬ ಆನ್ಲೈನ್ ವೇದಿಕೆಯೊಂದರಲ್ಲಿ ಬರೆದಿದ್ದ. ತಾನು ಗಂಡಸಾಗಿರುವುದಕ್ಕೆ ಇಷ್ಟು ಕಷ್ಟ; ಅದೇ ಓರ್ವ ಹೆಣ್ಣಿಗೆ ಇದೊಂದು ಸಂಗತಿಯೇ ಅಲ್ಲ. ಅವಳ ಬಳಿ ಆಯ್ಕೆಗಳು ಹೆಚ್ಚಿವೆ. ಹೀಗಾಗಿ ಆಕೆಗೆ ಒಣಜಂಭವೂ ಹೆಚ್ಚು… ಅಂತೆಲ್ಲ ಅದರಲ್ಲಿ ಸಾಕಷ್ಟು ಗೊಣಗಾಟಗಳಿದ್ದವು. ಇದಕ್ಕುತ್ತರವಾಗಿ “ನೀನು ಕೈಲಾಗದವನು” ಎಂದು ಸಾಕಷ್ಟು ಗಂಡಸರು ಆತನನ್ನು ಹಂಗಿಸಿದರೆ, ಈ ಟಿಪ್ಪಣಿಯಲ್ಲಿ ಹೆಂಗಸರ ಬಗ್ಗೆ ಕೊಂಚ ತಿರಸ್ಕಾರದ ಭಾವವೂ ಕಾಣುತ್ತಿದ್ದ ಪರಿಣಾಮವಾಗಿ ಹೆಣ್ಣುಮಕ್ಕಳಿಂದ ಭರ್ಜರಿ ಮಂಗಳಾರತಿಯೂ ಆಯಿತು.

ಆದರೆ ಕತೆಯು ಅಲ್ಲಿಗೆ ಮುಗಿದಿರಲಿಲ್ಲ. ಇದರ ಮುಂದುವರಿದ ಭಾಗವೆಂಬಂತೆ ಒಂದೆರಡು ದಿನಗಳ ನಂತರ ಯುವತಿಯೊಬ್ಬಳು ಈ ಬಗ್ಗೆ ಪ್ರತ್ಯೇಕವಾದ ಪೋಸ್ಟ್ ಒಂದನ್ನು ಬರೆದು, ಆತನ ಬರಹವನ್ನು ತೀವ್ರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಳು. ಆಕೆಯ ಮಾತುಗಳನ್ನು ಸಾರಾಂಶ ರೂಪದಲ್ಲಿ ಬರೆಯುವುದಾದರೆ ಅದು ಸುಮಾರಾಗಿ ಹೀಗಿತ್ತು: “ಗಂಡಸರ ಈ ಗೋಳು ಬರೀ ಓಳು. ತನಗೆ ಸಂಗಾತಿ ಬೇಕೆಂದು ಹೆಣ್ಣೊಬ್ಬಳು ಬಯಸಿದರೆ ಹಲವರು ಬಂದು ಸಾಲಾಗಿ ನಿಲ್ಲುವುದೇನೋ ಸರಿ. ಆದರೆ ಹೀಗೆ ಬಂದವರ ಅಸಲಿ ಉದ್ದೇಶಗಳು ಸಾಮಾನ್ಯವಾಗಿ ಭಿನ್ನವಾಗಿರುತ್ತವೆ. ಹೀಗಾಗಿ ನಮ್ಮ ಪರಿಸ್ಥಿತಿಯೇನೂ ಗಂಡಸರಿಗಿಂತ ಹೆಚ್ಚು ಭಿನ್ನವೇನಲ್ಲ”.

ಅಂದಹಾಗೆ ಇದೊಂದು ಉದಾಹರಣೆಯಷ್ಟೇ. ಇದು ಡೇಟಿಂಗ್ ಮತ್ತು ಮೋಜಿನ ಸಂಬಂಧಗಳ ಮಾತಾಯಿತು. ಇನ್ನು ವಿವಾಹಕ್ಕೆ ಸಂಬಂಧಿಸಿದಂತೆಯೂ ಇಂತಹ ಹಲವು ಚರ್ಚೆಗಳು ಜೋರಾಗಿ ನಡೆಯುತ್ತಿರುತ್ತವೆ. “ಮೂವತ್ತರ ಹುಡುಗನೊಬ್ಬನಿಗೆ ವರ್ಷಕ್ಕೆ ಐವತ್ತು ಲಕ್ಷ ಸಂಬಳದ ಉದ್ಯೋಗವಿರಬೇಕು. ಅವನಿಗೆ ಆಗಲೇ ಕಾರು, ಸ್ವಂತ ಮನೆಯಿರಬೇಕು. ವರ್ಷಕ್ಕೆರಡು ವಿದೇಶ ಪ್ರವಾಸ ಮಾಡಿಸಬೇಕು ಇತ್ಯಾದಿ ಬೇಡಿಕೆಗಳು ಅಸಾಧ್ಯದ ಮಾತು. ಇದು ನಮ್ಮಲ್ಲಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತಿದೆ”, ಎಂಬುದು ವಿವಾಹಕ್ಕೆ ಸಿದ್ಧರಾಗಿ ನಿಂತಿರುವ ಹುಡುಗರ ವಾದ. “ಬೆಸ್ಟ್ ಅನ್ನಿಸುವುದನ್ನು ಬಿಟ್ಟು ಬೇರ್ಯಾವುದೂ ತನಗೆ ಬೇಡ. ಆ ನಿರೀಕ್ಷೆಯನ್ನಿಟ್ಟುಕೊಂಡೇ ನಾನು ಮ್ಯಾಟ್ರಿಮೋನಿ ವೆಬ್-ಸೈಟ್ ಗಳವರೆಗೆ ಬಂದಿರುವುದು”, ಎನ್ನುವುದು ಹಸೆಮಣೆಯೇರಲಿರುವ ಹೆಣ್ಣಿನ ಅಭಿಪ್ರಾಯ. ಮೇಲ್ನೋಟಕ್ಕೆ ಕಾಣುವ ಸರಿ-ತಪ್ಪುಗಳು ಇಲ್ಲಿ ಕಿತ್ತಾಟಕ್ಕೊಂದು ನೆಪ. ಉಳಿದ ಲೆಕ್ಕಾಚಾರಗಳದ್ದು ಮಾತ್ರ ಬೇರೆಯೇ ಒಳಸುಳಿ.

ಒಟ್ಟಿನಲ್ಲಿ ನಿರ್ದಿಷ್ಟ ಪ್ರಕರಣವೊಂದನ್ನೇ ಕೇಂದ್ರಬಿಂದುವನ್ನಾಗಿರಿಸದೆ, ವಿವಿಧ ಆನ್ಲೈನ್ ವೇದಿಕೆಗಳಲ್ಲಿ ನಡೆಯುವ ಹಲವಾರು ಚರ್ಚೆಗಳನ್ನು ಗಮನಿಸಿಯೇ ನಾನಿದನ್ನು ಬರೆಯುತ್ತಿದ್ದೇನೆ. ಇದು ಸದ್ಯ ಒಂದೆಡೆಯಿರಲಿ. ಇನ್ನು ಖ್ಯಾತ ಅಮೆರಿಕನ್ ಲೇಖಕ ನೀಲ್ ಸ್ಟ್ರಾಸ್ “ದ ಗೇಮ್” ಎಂಬ ಬೆಸ್ಟ್-ಸೆಲ್ಲರ್ ಕೃತಿಯೊಂದನ್ನು ಬರೆದಿದ್ದಾರೆ. ಸಾಕಷ್ಟು ಮೆಚ್ಚುಗೆ, ಆಘಾತ, ವಿವಾದ, ಖಂಡನೆಗಳೆಲ್ಲವನ್ನೂ ಏಕಕಾಲದಲ್ಲಿ ಕಂಡ ವಿಚಿತ್ರ ಪುಸ್ತಕವಿದು. ಪಿಕ್-ಅಪ್ ಆರ್ಟಿಸ್ಟ್ ಗಳೆಂದು ತಮ್ಮನ್ನು ತಾವು ಕರೆದುಕೊಳ್ಳುವ ಕೆಲ ಪುರುಷರು ತಮ್ಮದೇ ರಹಸ್ಯ ತಂಡವೊಂದನ್ನು ಕಟ್ಟಿಕೊಂಡು, ಹೇಗೆ ತಮ್ಮ ಸುತ್ತಲಿರುವ ಹೆಂಗಸರನ್ನು ಉಪಾಯವಾಗಿ ತಮ್ಮ ಸುಖಕ್ಕಾಗಿ ಬಳಸಿಕೊಳ್ಳುತ್ತಾರೆ ಎಂಬುದರ ಬಗೆಗಿನ ದಾಖಲೆಯಿದು.

ತಾನು ಯಾವ ಹೆಣ್ಣನ್ನಾದರೂ ಗೆಲ್ಲಬಲ್ಲಷ್ಟು ಮೋಡಿಗಾರ ಎನ್ನುತ್ತಾನೆ ಒಬ್ಬ. ಹೆಣ್ಣಿನ ಮನಸ್ಸು ಒಂದು ಕಂಪ್ಯೂಟರ್ ಇದ್ದಂತೆ, ಇಂತಿಂಥಾ ಸವಾಲುಗಳಿಗೆ ಇಂತಿಂಥದ್ದೇ ಪ್ರೋಗ್ರಾಮಿಂಗ್ ಮಾಡಿ ಅದನ್ನು ಪಳಗಿಸಬಹುದು ಎನ್ನುತ್ತಾನೆ ಮತ್ತೊಬ್ಬ. ತಮಾಷೆಯೆಂದರೆ ಇಷ್ಟೆಲ್ಲಾ ಕೊಚ್ಚಿಕೊಳ್ಳುವ ಈ ಪುರುಷರು ತಮ್ಮಿಡೀ ಅಸ್ತಿತ್ವದ ಮಹತ್ವವನ್ನು ಇಂಥದ್ದೊಂದು ಬಾಲಿಶ ಆಟದ ಪದತಲದಲ್ಲಿರಿಸುತ್ತಾರೆ. ಅಗ್ನಿಪರೀಕ್ಷೆಯೆಂಬಂತೆ ಚಿತ್ರವಿಚಿತ್ರ ಪಟ್ಟುಗಳನ್ನು ಕಲಿಯುತ್ತಾರೆ. ಇದರಲ್ಲಿ ಕೊಂಚ ಹಿನ್ನಡೆಯಾದರೆ ತಾನು ಹುಟ್ಟಿರುವುದೇ ನಾಲಾಯಕ್ಕು ಎಂದು ನಿರಾಶೆಗೀಡಾಗುತ್ತಾರೆ. ಹೆಣ್ಣನ್ನು ಕೇವಲ ಒಂದು ಬೇಟೆಯಂತೆ ಕಾಣುವ, ಒಂದು ರೋಚಕ ಆಟದಂತೆ ಬಳಸುವ ಮತ್ತು ಅದಷ್ಟನ್ನೇ ಬದುಕೆಂದು ಭಾವಿಸಿರುವ ಈ ಮಂದಿ ಮಾನಸಿಕವಾಗಿ ಅದೆಷ್ಟು ಒಂಟಿಯಾಗಿದ್ದಾರೆ ಎಂಬುದನ್ನು ಓದಿಯೇ ತಿಳಿಯಬೇಕು.

ಚಿತ್ರ ಕೃಪೆ: ವಾಟ್ಸ್ಯಾಪ್

ಇಲ್ಲೆಲ್ಲಾ ನಮಗೆ ಕಾಣುವ ಬಹುದೊಡ್ಡ ಮನಸ್ಥಿತಿಯೆಂದರೆ “ಗಂಡು ವರ್ಸಸ್ ಹೆಣ್ಣು” ಎಂಬ ಧಾಟಿಯದ್ದು. ಉದಾಹರಣೆಗೆ ಪಿಕ್-ಅಪ್ ಆರ್ಟಿಸ್ಟ್ ಗಳಿಗೆ ಇದು ಗೆಲ್ಲಲೇಬೇಕಾಗಿರುವ ಒಂದು ಆಟ. ಇತ್ತ ಒಂದು ಚಂದದ ಚರ್ಚೆಯಾಗಬಲ್ಲ ಆನ್ಲೈನ್ ವೇದಿಕೆಯಲ್ಲೂ ಗಂಡು ಮತ್ತು ಹೆಣ್ಣು ತೀರಾ ರಿಂಗಿಗೆ ಇಳಿದಿರುವ ಬಾಕ್ಸಿಂಗ್ ಪಟುಗಳಂತೆ ತೊಡೆತಟ್ಟುತ್ತಾ ಬರುತ್ತಾರೆ. ಮಾಡು ಇಲ್ಲವೇ ಮಡಿ ಎಂಬಂತೆ ಜಿದ್ದಾಜಿದ್ದಿಗಿಳಿಯುತ್ತಾರೆ. ಹಗ್ಗ ಸವೆದುಹೋಗುವವರೆಗೂ ಹಗ್ಗಜಗ್ಗಾಟ ಮುಂದುವರೆಯುತ್ತದೆ. ಕೊನೆಗೂ ಉಳಿಯುವುದು ಕಹಿಯಾದ ಮನಸ್ಸುಗಳು ಮಾತ್ರ.

ಅನುಭವಗಳದ್ದು ನಂತರದ ಮಾತು. ಅಸಲಿಗೆ ಬಹಳಷ್ಟು ಸಂದರ್ಭಗಳಲ್ಲಿ ಇಬ್ಬರಿಗೂ ಪರಸ್ಪರರ ಲೋಕದಲ್ಲಿ ನಡೆಯುತ್ತಿರುವ ತಲ್ಲಣಗಳ ಬಗ್ಗೆ ಅಲ್ಪ ಮಾಹಿತಿಗಳೂ ಇರುವುದಿಲ್ಲ. ಆ ಬಗ್ಗೆ ತಿಳಿದುಕೊಳ್ಳುವಷ್ಟು ಕನಿಷ್ಠ ಸಂವೇದನೆ, ತಾಳ್ಮೆಯೂ ಕಾಣುವುದಿಲ್ಲ. ಹೀಗಿರುವಾಗ ಒಂದು ತಂಡವಾಗಿ ಮುಂದುವರೆಯುವ ಬದಲು ಸ್ವಂತದ ಶಕ್ತಿಪ್ರದರ್ಶನವೇ ಮುಖ್ಯವಾಗಿ ಬಿಡುವ ಸಂದರ್ಭಗಳೂ ಉದ್ಭವವಾಗುವುದುಂಟು. ಶಕ್ತಿಪ್ರದರ್ಶನವು ವಿಶೇಷವಾಗಿ ಈ ಗಂಡು-ಹೆಣ್ಣಿನ ವಿಷಯದಲ್ಲಿ ಏಕೆ ಅಪ್ರಸ್ತುತವೆಂದರೆ ಈರ್ವರೂ ತಮ್ಮದೇ ಆದ ರೀತಿಯಲ್ಲಿ ವಿಭಿನ್ನರು ಎಂಬ ಕಾರಣಕ್ಕಾಗಿ. ಗಂಡು ದೈಹಿಕವಾಗಿ ಶಕ್ತಿವಂತನಾಗಿರಬಹುದು. ಆದರೆ ಹೆಣ್ಣು ಮಾನಸಿಕ ಮತ್ತು ಭಾವನಾತ್ಮಕವಾಗಿ ಪುರುಷನಿಗಿಂತ ಸಾಕಷ್ಟು ಪಟ್ಟು ಪ್ರಬುದ್ಧಳೂ ಆಗಿರುತ್ತಾಳೆ. ಪ್ರಕೃತಿಯು ಇದನ್ನೇ ಒಂದು ಸುಂದರವಾದ ಸಮತೋಲಿತ ವ್ಯವಸ್ಥೆಯನ್ನಾಗಿಸಿ ನಮಗೆ ಕೊಟ್ಟಿದೆ.

ಇಂಗ್ಲಿಷ್ ಭಾಷೆಯಲ್ಲಿ “ಕಾಂಪ್ಲಿಮೆಂಟರಿ” ಎಂಬ ಸುಂದರ ಪದವಿದೆ. ಕನ್ನಡದಲ್ಲಿ “ಪೂರಕ” ಎಂಬರ್ಥದಲ್ಲಿ ನಾವಿದನ್ನು ಬಳಸುತ್ತೇವೆ. ಓರ್ವ ಗಂಡು ಮತ್ತು ಓರ್ವ ಹೆಣ್ಣು ತಮ್ಮದೇ ಧನ-ಋಣಗಳನ್ನು ಪೂರಕವಾಗಿಸಿಕೊಂಡು ಬದುಕು ಕಟ್ಟುತ್ತಾರೆ. ಜೊತೆಯಾಗಿ ಹೆಜ್ಜೆಹಾಕುತ್ತಾ ಬದುಕಿನ ಎಲ್ಲಾ ನೆಲೆಗಳಲ್ಲಿ ಹೆಚ್ಚಿನ ಔನ್ನತ್ಯಕ್ಕಾಗಿ ಹಂಬಲಿಸುತ್ತಾರೆ. ಇನ್ನು ಈ ಪೂರಕ ವ್ಯವಸ್ಥೆ ಮತ್ತು ಸಮಾನತೆಯ ಪರಿಕಲ್ಪನೆಗಳ ನಡುವಿನ ತಿಕ್ಕಾಟದಲ್ಲಿ ಗಂಡು-ಹೆಣ್ಣು ಅದ್ಯಾವ ರೀತಿಯಲ್ಲಿ ಮತ್ತಷ್ಟು ದ್ವೀಪಗಳಾಗಿ ದೂರವಾಗುತ್ತಿದ್ದಾರೆ ಎಂಬುದನ್ನು ಅರಿಯಲು ಮೇಲಿನ ಉದಾಹರಣೆಗಳೇ ಸಾಕು. ಈ ಎಲ್ಲಾ ಘರ್ಷಣೆಗಳಲ್ಲಿ ನಮಗೆ ಕಾಣುವುದು ಕೇವಲ ಶ್ರೇಷ್ಠತೆಯ ವ್ಯಸನ. ಅದ್ಯಾವುದೋ ಬಗೆಯ ಗೆಲ್ಲುವ ಹಪಾಹಪಿ.‌

ಇದನ್ನೂ ಓದಿ- http://“ನವಶತಮಾನವೂ, ನವೀನ ಸಂಬಂಧಗಳೂ” https://kannadaplanet.com/new-century-new-relationships/

ಅಷ್ಟಕ್ಕೂ ಗಂಡು ಮತ್ತು ಹೆಣ್ಣಿನ ಮಧ್ಯೆ ಈ ಅಘೋಷಿತ ಶೀತಲ ಸಮರವನ್ನು ಸಾರಿದವರು ಯಾರೆಂಬುದು ನಮಗೆ ಗೊತ್ತಿಲ್ಲ. ಅದರಿಂದ ಆಗಿರುವ ಲಾಭಗಳು ಅಷ್ಟರಲ್ಲೇ ಇದೆ. ಹೀಗಾಗಿ ಇದನ್ನು ಮುಂದುವರೆಸುವ ಅನಿವಾರ್ಯತೆಯೂ ನಮಗೆ ಇರಬೇಕಿಲ್ಲ. ಮನುಷ್ಯ ತನ್ನ ಬದುಕಿನ ಎಲ್ಲಾ ಆಯಾಮಗಳಲ್ಲಿ ಇಷ್ಟು ವಿಕಸಿತನಾದ ನಂತರವೂ, ಹಲವು ಸಂಗತಿಗಳು ಕೇವಲ ದೇಹಪ್ರಕೃತಿಯ ಭಿನ್ನತೆಯೊಂದಕ್ಕೆ ಅಂಟಿಕೊಂಡು ನಲುಗುತ್ತವೆ ಎಂದಾದರೆ ಅದಕ್ಕಿಂತ ಹಾಸ್ಯಾಸ್ಪದ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಈ ಜಂಜಾಟಗಳಲ್ಲಿ ಬೆತ್ತಲಾಗುತ್ತಿರುವುದು ನಮ್ಮ ಆಷಾಢಭೂತಿತನವಷ್ಟೇ.

ಅಘೋಷಿತ ಶೀತಲ ಸಮರದ ಕದನವಿರಾಮವು ನಮ್ಮಿಂದಲೇ ಶುರುವಾಗಲಿ. ಈಗಿಂದೀಗಲೇ! 

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article