ಬೆಂಗಳೂರು: ರೂ.4.23 ಲಕ್ಷ ಸಾಲ ಕೊಟ್ಟು ಅದಕ್ಕೆ 42 ಲಕ್ಷ ರೂ. ಬಡ್ಡಿ, ಚಕ್ರ ಬಡ್ಡಿ ಮೀಟರ್ ಬಡ್ಡಿ ವಸೂಲಿ ಮಾಡಿ ದೌರ್ಜನ್ಯ ಎಸಗಿದ್ದ ಆರೋಪದಡಿಯಲ್ಲಿ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋನದಾಸಪುರ ಗ್ರಾಮದ ನಿವಾಸಿ ಶಾರದಮ್ಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆಯಿಂದ ವಂಚನೆಗೀಡಾಗಿ ಹಣ ಕಳೆದುಕೊಂಡಿದ್ದ ಅದೇ ಗ್ರಾಮದ ಪವಿತ್ರಾ ಎಂಬುವರು ದೂರು ನೀಡಿದ್ದರು.
ಪವಿತ್ರಾ ಅವರು ಶಾರದಮ್ಮ ಅವರ ಬಳಿ ಹಂತ ಹಂತವಾಗಿ ಸುಮಾರು ರೂ. 4.23 ಲಕ್ಷ ಸಾಲ ಪಡೆದಿದ್ದರು. ಆರಂಭದಲ್ಲಿ ತಿಂಗಳಿಗೆ ಶೇ. 10 ಬಡ್ಡಿ ಪಡೆಯುತ್ತಿದ್ದರು. ಒಂದು ವರ್ಷದ ನಂತರ ಶಾರದಮ್ಮ ವಾರಕ್ಕೆ ಶೇ. 15 ಬಡ್ಡಿಯನ್ನು ನೀಡುವಂತೆ ಕಿರುಕುಳ ನೀಡಿ ರೂ. 42 ಲಕ್ಷಕ್ಕೂ ಹೆಚ್ಚು ಹಣವನ್ನು ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಾಲ ಕುರಿತು ಪವಿತ್ರಾ ತನ್ನ ಪತಿಗೆ ತಿಳಿಸಿರಲಿಲ್ಲ. ಸಾಲಕ್ಕೆ ಬಡ್ಡಿ ಕಟ್ಟಲು ತಮ್ಮ ಸಂಬಂಧಿಕರಿಂದ ಸುಮಾರು 20 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಬಡ್ಡಿ ಹಣಕ್ಕಾಗಿ ಶಾರದಮ್ಮ ನೀಡುತ್ತಿದ್ದ ಮಾನಸಿಕ ಕಿರುಕುಳ ತಾಳಲಾರದೆ ಪವಿತ್ರಾ ಒಂದು ಬಾರಿ ಆತ್ಮಹತ್ಯೆಗೊ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪತಿಗೆ ವಿಷಯ ತಿಳಿದು ಶಾರದಮ್ಮ ಬಳಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರೂ. 18 ಲಕ್ಷ ಹಣವನ್ನು ನೀಡಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಉಳಿದ 20 ಲಕ್ಷ ರೂ ಹಣವನ್ನು ನಗದು ಮೂಲಕ ನೀಡಲಾಗಿದೆ. ಪ್ರಕರಣ ದಾಖಲಾಗಿ ಮೂರು ದಿನ ಕಳೆದರೂ ಪೊಲೀಸರು ಶಾರದಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರ ಮಹಿಳೆ ಪವಿತ್ರಾ ದಂಪತಿಗಳು ಆರೋಪಿಸಿದ್ದಾರೆ.