ಋತುಚಕ್ರ ರಜೆ: ಸರ್ಕಾರಿ ಮಹಿಳಾ ನೌಕರರ ಸಂಘ ಕಾರಣವೇ ಹೊರತು ಸರ್ಕಾರಿ ನೌಕರರ ಸಂಘ ಅಲ್ಲ: ರೋಶಿನಿ ಗೌಡ ಸ್ಪಷ್ಟನೆ

Most read

ಹೊಸಪೇಟೆ: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಪ್ರಯತ್ನದಿಂದಾಗಿ ಋತುಚಕ್ರ ರಜೆ ಮಂಜೂರಾಗಿದೆಯೇ ಹೊರತು ಬೇರೆ ಯಾರೂ ಕಾರಣರಲ್ಲ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷೆ ರೋಶಿನಿ ಗೌಡ ಪ್ರತಿಪಾದಿಸಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಈಗ ನಾವೇ ಕಾರಣ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ರಾಜ್ಯ ಸರ್ಕಾರಿ ಮಹಿಳಾ ಸಂಘ ವಿವಿಧ ಜಿಲ್ಲೆಗಳಿಗೆ ತೆರಳಿ ಜಿಲ್ಲಾ ಸಂಘಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ಋತುಚಕ್ರ ರಜೆ ಕೊಡಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ದುಂಬಾಲು ಬಿದ್ದೆದ್ದೆವು. ನಮ್ಮ ಬೇಡಿಕೆಯನ್ನು ಸಂಘ ಕಡೆಗಣಿಸಿತು. ನಂತರ ನಾವು ಎರಡು ವರ್ಷದ ಹಿಂದೆ ಮಹಿಳಾ ಸಂಘ ಸ್ಥಾಪಿಸಿ ಸರ್ಕಾರದ ಮೇಲೆ ಒತ್ತಡ ಹೇರುತ್ತಾ ಬರಲಾಯಿತು. ಮುಖ್ಯಮಂತ್ರಿ, ಡಿಸಿಎಂ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಸೇರಿದಂತೆ ಅನೇಕ  ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅಂತಿಮವಾಗಿ ಸರ್ಕಾರ ಒಪ್ಪಿಗೆ ನೀಡಿತು ಎಂದು ವಿವರಿಸಿದರು.

ರಾಜ್ಯ ಸರ್ಕಾರದ ಒಟ್ಟು ನೌಕರರ ಪೈಕಿ ಶೇ. 52ರಷ್ಟು ಮಹಿಳೆಯರಿದ್ದಾರೆ. ಹಾಗಾಗಿ ಸಂಘದಲ್ಲಿ ಸಮಾನ ಅವಕಾಶ ಕೊಡಿ ಎಂದು ಬೇಡಿಕೆ ಇರಿಸಿದಾಗ ಮನವಿಯನ್ನು ಆಲಿಸಲಿಲ್ಲ. ಬೇಕಾದಲ್ಲಿ ಪ್ರತ್ಯೇಕ ಸಂಘ ಕಟ್ಟಿಕೊಳ್ಳುವಂತೆ ಸವಾಲು ಹಾಕಿದರು. ಅವರ ಸವಾಲನ್ನು ಸ್ವೀಕರಿಸಿ ಮಹಿಳಾ ಸಂಘ ರಚಿಸಲಾಗಿದೆ ಎಂದರು.’ ಎಂದು ಅವರು ಹೇಳಿದರು.

8ನೇ ವೇತನ ಆಯೋಗ ರಚನೆ, ಎನ್‌ಪಿಎಸ್ ರದ್ದತಿ, ಮಾತೃತ್ವ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡುವುದು, ಸೆಪ್ಟೆಂಬರ್ 13ರಂದು (ಮೇರಿ ದೇವಾಸಿಯಾ ಜನ್ಮದಿನ) ಮಹಿಳಾ ಸರ್ಕಾರಿ ನೌಕರರ ದಿನ ಎಂದು ಘೋಷಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು  ತಿಳಿಸಿದರು.

ಬೆಂಗಳೂರಿನ ಬಾಲಭವನ ಬಳಿ ಸಂಘಕ್ಕೆ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದೆ. ಸರ್ಕಾರ ನಮ್ಮ ಇತರ ಬೇಡಿಕೆಗಳನ್ನು ಈಡೇರಿಸುವ ವಿಶ್ವಾಸ ಇದೆ ಎಂದರು. ಸಂಘದ ರಾಜ್ಯ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ ಎಂ. ಆಶಾರಾಣಿ. ನೀಲಮ್ಮ ಗಚ್ಚಿನಮಠ, ವಿಜಯಕುಮಾರಿ, ಪದ್ಮಾವತಿ, ರೇಖಾ ಹಾಜರಿದ್ದರು.

More articles

Latest article