ಮೇಕೆದಾಟು ಯೋಜನೆ: ಕಾನೂನು ಹೋರಾಟದಲ್ಲಿ ರಾಜ್ಯಕ್ಕೆ ನ್ಯಾಯ ಸಿಕ್ಕಿದೆ: ಡಿಸಿಎಂ ಶಿವಕುಮಾರ್ ಹರ್ಷ

Most read

ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಕರ್ನಾಟಕಕ್ಕೆ ನ್ಯಾಯ ಸಿಕ್ಕಂತಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಜವಬ್ದಾರಿ ಹೊತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತೀರ್ಪು ಬಂದ ನಂತರ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನೀರು, ನಮ್ಮ ಹಕ್ಕು’ ಯೋಜನೆ ಅಡಿಯಲ್ಲಿ ಮೇಕೆದಾಟು ಯೋಜನೆ ಜಾರಿಗೊಳಿಸುತ್ತಿದ್ದೇವೆ.ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗುವುದಿಲ್ಲ. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಲಾಭವಾಗಲಿದೆ ಎಂದರು.

ಮೇಕೆದಾಟು ಯೋಜನೆಯನ್ನು ರಾಜ್ಯದ ನೆಲದಲ್ಲಿ, ನಮ್ಮ ಹಣದಲ್ಲಿ ಜಾರಿಗೊಳಿಸಲಾಗುತ್ತಿದೆ. ಒಂದು ವೇಳೆ ನೀರಿನ ಕೊರತೆ ಉಂಟಾದರೆ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟು ನೆರವಿಗೆ ಬರಲಿದೆ. ಇದು ರಾಜ್ಯ, ಬೆಂಗಳೂರಿನ ಗೆಲುವು. ಬೆಂಗಳೂರಿನಲ್ಲಿ ನೆಲೆಸಿರುವ ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳ ಜನರಿಗೂ ನೀರು ಲಭ್ಯವಾಗಲಿದೆ. ಆದ್ದರಿಂದ ಈ ಯೋಜನೆಗೆ ಸಹಕಾರ ನೀಡಬೇಕು ಎಂದು ತಮಿಳುನಾಡಿಗೆ ಮನವಿ ಮಾಡಿಕೊಳ್ಳುವುದಾಗಿ ಡಿಕೆ ಶಿವಕುಮಾರ್‌ ಹೇಳಿದರು.

ನ್ಯಾಯಾಲಯ ನೀಡಿರುವ ತೀರ್ಮಾನದ ಪ್ರಕಾರ ತಮಿಳುನಾಡು ತನ್ನ ಪಾಲಿನ ನೀರನ್ನು ಪಡೆಯಲಿದೆ. ಹೀಗಾಗಿ ನಾವು ಈ ಯೋಜನೆ ಮುಂದುವರಿಸಿಕೊಂಡು ಹೋಗುತ್ತೇವೆ. ಕೇಂದ್ರ ಜಲ ಆಯೋಗಕ್ಕೆ ಈ ಯೋಜನೆಗೆ ಅನುಮತಿ ನೀಡದೇ ಬೇರೆ ದಾರಿ ಇಲ್ಲ. ಅವರು ರಾಜ್ಯಕ್ಕೆ ನ್ಯಾಯ ಒದಗಿಸಿ ಕೊಡಲೇಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

More articles

Latest article