ಆದಾಯದ ಬಡತನದಿಂದ ಮೇಲೆ ಬಂದ ಮಾಧ್ಯಮಗಳು ಸತ್ಯದ ಬಡತನದಿಂದ ನೆಲಕಚ್ಚುತ್ತಿವೆ: ಕೆ.ವಿ.ಪ್ರಬಾಕರ್ ವಿಶ್ಲೇಷಣೆ

Most read

ಬಳ್ಳಾರಿ: ನಮ್ಮ ಸಂವಿಧಾನ ಪ್ರತ್ಯೇಕವಾಗಿ “ಪತ್ರಿಕಾ ಸ್ವಾತಂತ್ರ್ಯ” ಕೊಟ್ಟಿಲ್ಲ. ವಾಕ್ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವಾಗಿದೆ. ಹೀಗಾಗಿ ಸಂವಿಧಾನ ಉಳಿದರೆ ಮಾತ್ರ ಪತ್ರಿಕಾ ಸ್ವಾತಂತ್ರ್ಯವೂ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.

ರಾಜ್ಯ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಪತ್ರಿಕಾ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲೇ ನಮ್ಮ ಮಾಧ್ಯಮಗಳ ನೆತ್ತಿ ಮೇಲೆ ತೂಗುತ್ತಿರುವ ಕತ್ತಿಯ ಬಗ್ಗೆಯೂ ನಾವು ಗಂಭೀರವಾಗಿ ಯೋಚಿಸಬೇಕಿದೆ. ಮಾಧ್ಯಮಗಳ ಅಸ್ತಿತ್ವ ಉಳಿದಿರುವುದೇ ಪತ್ರಿಕಾ ಸ್ವಾತಂತ್ರ್ಯದಿಂದ. ಈಗ ಪತ್ರಿಕಾ ಸ್ವಾತಂತ್ರ್ಯ ಬಹಳ ಅಪಾಯದಲ್ಲಿದೆ. 2024ರ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ 181 ದೇಶಗಳ ಪೈಕಿ 151 ನೇ ಸ್ಥಾನದಲ್ಲಿದೆ ಎಂದು ನೆನ್ನೆಯೇ ಹೇಳಿದ್ದೆ. ಆದರೆ, ನಾವು ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ ಪತ್ರಿಕಾ ಸ್ವಾತಂತ್ರ್ಯದ ಕುಸಿತದ ಜೊತೆಗೇ ವಾಕ್ ಸ್ವಾತಂತ್ರ್ಯದ ಸೂಚ್ಯಂಕದಲ್ಲೂ ಭಾರತ 109ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಈ ಕುಸಿತಗಳ ಬಗ್ಗೆ ನಾವು ಪತ್ರಕರ್ತರು ಗಂಭೀರವಾಗಿ ಯೋಚಿಸಬೇಕಿದೆ.

ನಮ್ಮ ಸಂವಿಧಾನದ ಉಳಿವಿಗೂ ನಮ್ಮ ಪತ್ರಿಕಾ ಸ್ವಾತಂತ್ರ್ಯದ ಉಳಿವಿಗೂ ನೇರಾ ನೇರ ಸಂಬಂಧವಿದೆ.‌ ಏಕೆಂದರೆ, ನಮ್ಮ ಸಂವಿಧಾನ ನಮಗೆ ಪ್ರತ್ಯೇಕವಾದ “ಪತ್ರಿಕಾ ಸ್ವಾತಂತ್ರ್ಯ” ಅಂತ ಏನೂ ಕೊಟ್ಟಿಲ್ಲ. ಸಂವಿಧಾನದಲ್ಲಿರುವ ವಾಕ್ ಸ್ವಾತಂತ್ರ್ಯವೇ ನಮ್ಮ ಪತ್ರಿಕಾ ಸ್ವಾತಂತ್ರ್ಯವೂ‌ ಅಗಿದೆ. ಹೀಗಾಗಿ ನಾವು ಸಂವಿಧಾನವನ್ನು ಉಳಿಸಿಕೊಳ್ಳುವ ದಿಟ್ಟ ಪ್ರಯತ್ನಕ್ಕೆ ಗಟ್ಟಿಯಾಗಿ ನಿಲ್ಲದ ಹೊರತು ಮಾಧ್ಯಮ‌ ಕ್ಷೇತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ ಎಂದರು.

ಭಾರತೀಯ ಪತ್ರಿಕೋದ್ಯಮಕ್ಕೆ ಬಹಳ ಉನ್ನತವಾದ ಚರಿತ್ರೆ ಇದೆ. ಸ್ವಾತಂತ್ರ್ಯ ಹೋರಾಟದಿಂದ,  ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವವರೆಗೂ ಮಹತ್ವದ ಪಾತ್ರ ನಿರ್ವಹಿಸಿರುವುದನ್ನು ಚರಿತ್ರೆಯುದ್ದಕ್ಕೂ ಕಾಣುತ್ತೇವೆ. ಸಾವಿರಾರು ವರ್ಷಗಳ ಭಾರತದ ಸಾಮಾಜಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ ಬೆಸುಗೆಯನ್ನು ಹರಿಯಲು ಬ್ರಿಟೀಷರು ಮುಂದಾದಾಗಲೆಲ್ಲಾ ಈ ಬೆಸುಗೆಯನ್ನು ಹೆಣೆಯುವ ಜವಾಬ್ದಾರಿಯನ್ನು ಭಾರತೀಯ ಪತ್ರಿಕಾ ರಂಗ ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಭಾರತದ ಮೊದಲ ಪತ್ರಿಕೆ ಎಂದು ಹೇಳಲಾಗುವ “ಬೆಂಗಾಲ್ ಗೆಜೆಟ್” ಕೂಡ ಬ್ರಿಟೀಷರು ಹೇಗೆ ಭಾರತೀಯ ಸಮಾಜವನ್ನು ವಿಭಜಿಸುತ್ತಿದ್ದಾರೆ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಹೇಳುವ ಮತ್ತು ಖಂಡಿಸುವ ಮೂಲಕವೇ ಹೆಚ್ಚು ಜನಪ್ರಿಯವಾಯಿತು. ಬಳಿಕ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಗಾಂಧಿ, ಭಗತ್ ಸಿಂಗ್, ಅಂಬೇಡ್ಕರ್, ಗಂಗಾಧರನಾಥ ತಿಲಕ್ ಅವರೂ ಆರಂಭಿಸಿದ ಪತ್ರಿಕೆಗಳು ಬೇರೆ ಬೇರೆ ಧ್ವನಿಯಲ್ಲಿ ಭಾರತವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿವೆ.  ಹೀಗಾಗಿ ಭಾರತೀಯ ಪತ್ರಿಕಾ ಪರಂಪರೆಗೆ ಸ್ವಾತಂತ್ರ್ಯ ಹೋರಾಟವನ್ನು ಕಟ್ಟಿದ ಚರಿತ್ರೆ ಇರುವಂತೆಯೇ, ಭಾರತವನ್ನು ಜಾತ್ಯತೀತ, ಧರ್ಮಾತೀತವಾಗಿ ಒಗ್ಗಟ್ಟಾಗಿ ನಿಲ್ಲಿಸಿದ ಹೆಮ್ಮೆ ಕೂಡ ಇದೆ ಎಂದು ಹೇಳಿದರು.

ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಹೊಸ್ತಿಲಿನ ಪತ್ರಿಕೋದ್ಯಮಕ್ಕೆ “ಆದಾಯದ ಬಡತನ” ಇತ್ತೇ ಹೊರತು “ಸತ್ಯದ ಬಡತನ” ಇರಲಿಲ್ಲ. ಆದಾಯದ ಬಡತನದಲ್ಲಿದ್ದ ಪತ್ರಿಕೆಗಳು ಸತ್ಯದ ಶ್ರೀಮಂತಿಕೆ ಹೊಂದಿದ್ದ ಕಾರಣಕ್ಕೆ ದೇಶದ ಜನರೇ ಅಂತಹ ಪತ್ರಿಕೆಗಳನ್ನು ಉಳಿಸಿ ಬೆಳೆಸಿದ್ದನ್ನು ಅಂಬೇಡ್ಕರ್ ಮತ್ತು ಮಹಾತ್ಮಗಾಂಧಿಯವರೂ ಹೇಳಿದ್ದಾರೆ. ಇವರ ಬಳಿ ಹಣಕ್ಕೆ ಬಡತನ‌ ಇತ್ತು, ಸತ್ಯಕ್ಕೆ ಬಡತನ ಇರಲಿಲ್ಲ ಎಂದರು.

ಆದರೆ, ಇಂದು ಆದಾಯದ ಬಡತನದಿಂದ ಮೇಲೆ ಬಂದಿರುವ ಮಾಧ್ಯಮ ಕ್ಷೇತ್ರ ಸತ್ಯದ ಬಡತನದ ಕಾರಣಕ್ಕೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಕೋವಿಡ್ ಸಂದರ್ಭದಲ್ಲಿ ಮತ್ತು ನೋಟು ನಿಷೇಧದ ಸಂದರ್ಭದಲ್ಲಿ ಪತ್ರಿಕೆ ಮತ್ತು ಚಾನಲ್ ಗಳ ಆದಾಯಕ್ಕೆ ಬಹಳ ಪೆಟ್ಟು ಬಿದ್ದಿತ್ತು. ಈ ಆಘಾತದಿಂದ ಮಾಧ್ಯಮಗಳು ಮೂರೇ ವರ್ಷದಲ್ಲಿ ಮೇಲೆ ಬಂದವು. ಆದರೆ, ಸತ್ಯದ ಬಡತನವನ್ನು ನಮ್ಮ ಮಾಧ್ಯಮ ಕ್ಷೇತ್ರ ತೀವ್ರವಾಗಿ ಅನುಭವಿಸುತ್ತಿದೆ. ಈ ಕಾರಣಕ್ಕೇ “Fact Check” ಮಾಡುವ ಪರಿಸ್ಥಿತಿ ಬಂದಿದೆ.

ಕೆಲವು ಮಾಧ್ಯಮ‌ ಸಂಸ್ಥೆಗಳೂ ಮತ್ತು ಸರ್ಕಾರ ಕೂಡ Fact Check ಆರಂಭಿಸುವ ಪರಿಸ್ಥಿತಿ ಬಂದಿದೆ ಎಂದರೆ ಸುಳ್ಳುಗಳಿಂದ ಸತ್ಯವನ್ನು ಹುಡುಕುವುದೂ ಈಗ ಒಂದು ಕೆಲಸ ಆಗಿದೆ ಅಂತಲೇ ಅರ್ಥ. ಇದು ಇವತ್ತಿನ‌ ಮಾಧ್ಯಮ ರಂಗ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವುದರ ಉದಾಹರಣೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಕರ್ತರು ಸತ್ಯವನ್ನು ಮತ್ತು ಸಂವಿಧಾನದ ಮೌಲ್ಯಗಳನ್ನು ಮತ್ತೆ ಬೆಸೆಯುವ ನೇಕಾರರ ರೀತಿ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ನಮ್ಮ ಸಂವಿಧಾನದಿಂದ “ಜಾತ್ಯತೀತ” ಮತ್ತು “ಸಮಾಜವಾದ” ಎನ್ನುವ ಮೌಲ್ಯಗಳನ್ನು ಕಿತ್ತು ಹಾಕಬೇಕು ಎನ್ನುವ ವ್ಯವಸ್ಥಿತ ಷಡ್ಯಂತ್ರ ಶುರುವಾಗಿದೆ. ಇವೆರಡೂ ಮೌಲ್ಯಗಳು ನಮ್ಮ ಸಂವಿಧಾನದ ಪ್ರಾಣವಾಯು. ಮಾಧ್ಯಮಗಳು ಈ ಪ್ರಾಣವಾಯುವನ್ನು ಉಳಿಸುವ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುವ ಮೂಲಕ ಭಾರತದ ಜಾತ್ಯತೀತ ಮತ್ತು ಸಮಾಜವಾದಿ ಬೆಸುಗೆ ಹರಿಯದಂತೆ ಕಾಪಾಡಿಕೊಳ್ಳುವ ನೇಕಾರರಾಗಬೇಕಿದೆ ಎಂದು ಕೆ.ವಿ.ಪ್ರಭಾಕರ್ ಕರೆ ನೀಡಿದರು.

ರಾಜ್ಯ ಕಾರ್ಯನಿರತ‌ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ವಸತಿ ಸಚಿವರ ಮಾಧ್ಯಮ‌ ಸಲಹೆಗಾರರಾದ ಲಕ್ಷ್ಮೀನಾರಾಯಣ್ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮೊದಲು ಸುಳ್ಳು ಬ್ರೇಕಿಂಗ್ ಕೊಡೋದು, ಆಮೇಲೆ ಸತ್ಯ ಮಾಡೋಕೆ ಹೆಣಗಾಡೋದು ಏಕೆ:

“ತಾವೇ ಮೊದಲು” ಸುದ್ದಿ ಕೊಡಬೇಕು ಎನ್ನುವ ಧಾವಂತದಲ್ಲಿ ಪರಿಶೀಲನೆ ನಡೆಸದೆ ಕಾಲ್ಪನಿಕ ಬ್ರೇಕಿಂಗ್ ಸುದ್ದಿ ಕೊಟ್ಟು ಬಿಡೋದು, ಬಳಿಕ ತಮ್ಮ ಕಲ್ಪನೆಯನ್ನು ಸತ್ಯ ಮಾಡೋಕೆ ಒದ್ದಾಡೋದು ನನ್ನ ಅನುಭವಕ್ಕೆ ಬರುತ್ತಿದೆ. ಇದು ವೃತ್ತಿಪರತೆಯ ಘನತೆಯನ್ನು ಕುಂದಿಸುತ್ತದೆ. ಮುಂದಿನ ಅಧಿವೇಶನದಲ್ಲಿ ಸಮಾಜದ ನೆಮ್ಮದಿ ಹಾಳು ಗೆಡವುವ “ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣ” ತಡೆಗೆ ಕಾಯ್ದೆ ತರುವ  ಚರ್ಚೆ ನಡೆಯುತ್ತಿದೆ ಎಂದರು.

More articles

Latest article