ಮೇ ದಿನದ ಪ್ರಸ್ತುತತೆ – ಎಡಪಕ್ಷಗಳ ಐಕ್ಯತೆಯ ತುರ್ತು

Most read

ದಲಿತ ರಾಜಕಾರಣವನ್ನೂ ಒಳಗೊಂಡಂತೆ ಎಲ್ಲ ಬಂಡವಾಳಿಗ  ರಾಜಕೀಯ ಪಕ್ಷಗಳೂ ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆಯನ್ನು ಅಪ್ಪಿಕೊಂಡಿರುವಾಗ, ತಳಸಮುದಾಯಗಳನ್ನು ಪ್ರತಿನಿಧಿಸುವ, ಸಮಾಜವಾದಿ ಮುಖವಾಡದ ರಾಜಕೀಯ ಪಕ್ಷಗಳೂ ಬಲಪಂಥೀಯ ರಾಜಕಾರಣದತ್ತ ವಾಲುತ್ತಿರುವಾಗ ಈ ಹಾಸುಗಲ್ಲುಗಳನ್ನು ಜೋಡಿಸುವ ಜವಾಬ್ದಾರಿ ಎಡಪಕ್ಷಗಳ ಮೇಲಿದೆ. ಈ ಹೊಣೆಗಾರಿಕೆಯನ್ನು ನೈತಿಕತೆಯ ನೆಲೆಯಲ್ಲಿ ನಿಭಾಯಿಸಲು ಎಡಪಕ್ಷಗಳ ಐಕ್ಯತೆ ಅತ್ಯವಶ್ಯವಾಗಿದೆನಾ ದಿವಾಕರ

ʼ ವಿಕಸಿತ ಭಾರತ ʼ ಆಗುವತ್ತ ಭಾರತ ಸಾಗುತ್ತಿರುವ ಹಾದಿ ಇದು. ಜನಸಂಖ್ಯೆಯ ಶೇಕಡಾ 1ರಷ್ಟು ಸಿರಿವಂತರು ದೇಶದ ಶೇಕಡಾ 40ರಷ್ಟು ಸಂಪತ್ತನ್ನೂ, ಶೇಕಡಾ 22ರಷ್ಟು ಆದಾಯವನ್ನೂ ಹೊಂದಿರುವ ಈ ಹಾದಿಯಲ್ಲಿ ಭಾರತದ ದುಡಿಮೆಯ ದನಿಗಳು ಅರಣ್ಯ ರೋಧನವಾಗುತ್ತಿರುವ ಹೊತ್ತಿನಲ್ಲೇ, ಭಾರತದ ಕಾರ್ಮಿಕರು ಮತ್ತೊಂದು ಮೇ ದಿನವನ್ನು ಆಚರಿಸುತ್ತಿದ್ದಾರೆ. ಆಚರಣಾತ್ಮಕ (Ritualistic) ಎನ್ನಬಹುದಾದರೂ ಅತ್ಯವಶ್ಯವಾದ ರಾಷ್ಟ್ರವ್ಯಾಪಿ ಮುಷ್ಕರವನ್ನು ಮೇ 20ರಂದು ಘೋಷಿಸಲಾಗಿದೆ. ಈ ಸಾರ್ವತ್ರಿಕ ಮುಷ್ಕರ ಭಾರತದ ಸಮಸ್ತ ಕಾರ್ಮಿಕರ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂಬ ವಿಶ್ವಾಸದೊಂದಿಗೆ ಕಾರ್ಮಿಕರು ರಸ್ತೆಗಿಳಿಯಲಿದ್ದಾರೆ. ಆದರೆ ವಾಸ್ತವದಲ್ಲಿ ಈ ʼ ಸಮಸ್ತ ʼ ಎಂಬ ಪದವನ್ನು ಒಡೆದುಕಟ್ಟಿದಾಗ ಅಲ್ಲಿ ಗೋಚರಿಸುವುದು ಈ ದೇಶದ ಸಾಂಸ್ಕೃತಿಕ ರಾಜಕಾರಣ ಮತ್ತು ಆಳ್ವಿಕೆಯ ಮಾದರಿಗಳು ಸೃಷ್ಟಿಸಿ-ಪೋಷಿಸಿಕೊಂಡು ಬಂದಿರುವ ವಿಭಜಕ ಬೇಲಿಗಳು.

ಹೇ ಮಾರ್ಕೆಟ್‌ – ಕಾರ್ಮಿಕ ಹೋರಾಟ ಮತ್ತು ನರಮೇಧ – ಸಾಂದರ್ಭಿಕ ಚಿತ್ರ

1886ರಲ್ಲಿ ಹೇ ಮಾರ್ಕೆಟ್‌ ಚೌಕದಲ್ಲಿ ನಡೆದ ಕಾರ್ಮಿಕ ಹೋರಾಟ ಮತ್ತು ನರಮೇಧದಲ್ಲಿ ಬಲಿಯಾದ ಶ್ರಮಿಕರ ನೆನಪಿನಲ್ಲಿ ಆಚರಿಸಲಾಗುವ ಮೇ ದಿನ, ಕೇವಲ ಇತಿಹಾಸವನ್ನು ನೆನಪಿಸುವ ದಿನ ಆಗಕೂಡದು. ಬದಲಾಗಿ, ಈ 14 ದಶಕಗಳಲ್ಲಿ ಬದಲಾಗಿರುವ ಜಗತ್ತು, ವಿಶ್ವದ ಭೌಗೋಳಿಕ ಪಲ್ಲಟಗಳು, ರೂಪಾಂತರಗೊಂಡಿರುವ ವ್ಯಾಪಾರ-ವಾಣಿಜ್ಯ ಪ್ರಪಂಚ ಹಾಗೂ ನವ ಉದಾರವಾದ-ಡಿಜಿಟಲ್‌ ಆರ್ಥಿಕತೆಯಲ್ಲಿ ಪಡೆದುಕೊಂಡಿರುವ ಹೊಸ ರೂಪ, ಈ ಬೆಳವಣಿಗೆಗಳಲ್ಲಿ ಗುರುತಿಸಬಹುದಾದ ವ್ಯತ್ಯಯಗಳನ್ನು ಹಾಗೂ ಅದರಿಂದ ಬಾಧಿತರಾಗುತ್ತಲೇ ಇರುವ ಕೋಟ್ಯಂತರ ಶ್ರಮಜೀವಿಗಳ ವರ್ತಮಾನದ ಬದುಕನ್ನು ಇಣುಕಿ ನೋಡುವ ಒಂದು ಸಂದರ್ಭವಾಗಬೇಕು.

ಡಿಜಿಟಲ್‌ ಭಾರತ ಹೊರನೋಟಕ್ಕೆ ಎಷ್ಟೇ ಆಕರ್ಷಕವಾಗಿ ಕಂಡರೂ, ಭಾರತದ ನಗರಗಳು ಎಷ್ಟೇ ಆಧುನಿಕತೆಯತ್ತ ಸಾಗುತ್ತಿದ್ದರೂ, ಈ ನವ ಆರ್ಥಿಕತೆಯ ನಿರ್ಮಾಣದ ಹಿಂದೆ ಒಂದು ಬೃಹತ್‌ ಜನಸಂಖ್ಯೆ, ನಾಳೆಗಳನ್ನು ಎದುರುನೋಡುತ್ತಲೇ ನಿತ್ಯ ಬದುಕನ್ನು ಸವೆಸುತ್ತಿರುವ ವಾಸ್ತವವನ್ನು ಗುರುತಿಸಬಹುದು. ಈ ವಾಸ್ತವಗಳ ನಡುವೆ ದೇಶದ 30.59 ಕೋಟಿ ಗಿಗ್‌ ಕಾರ್ಮಿಕರು (ಕರ್ನಾಟಕದಲ್ಲಿ 2 ಲಕ್ಷ) , 10.29 ಲಕ್ಷ ಆಶಾ ಕಾರ್ಯಕರ್ತೆಯರು, 13.48 ಲಕ್ಷ ಅಂಗನವಾಡಿ ಕಾರ್ಮಿಕರು, 10.23 ಲಕ್ಷ ಸಹಾಯಕರು ತಮ್ಮ ಸುಸ್ಥಿರ ಭವಿಷ್ಯದ ಭರವಸೆಯೇ ಇಲ್ಲದೆ ದೇಶದ ಆರ್ಥಿಕತೆಗೆ ಬೆವರು ಸುರಿಸುತ್ತಿದ್ದಾರೆ.

2021-22ರ ಸಮೀಕ್ಷೆಯ ಪ್ರಕಾರ ದೇಶದಲ್ಲಿ 44 ಕೋಟಿ ಅಸಂಘಟಿತ ವಲಯಕ್ಕೆ ಸೇರಿದ ಅಸಂಘಟಿತ ಕಾರ್ಮಿಕರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 5.6  ಕೋಟಿ ಜನರು ಕೃಷಿ ವಲಯಕ್ಕೆ ಮರಳಿದ್ದು, ಕೃಷಿ ಕ್ಷೇತ್ರವನ್ನೇ ಅವಲಂಬಿಸಿರುವವರ ಸಂಖ್ಯೆ 15.8 ಕೋಟಿಯಷ್ಟಿದೆ. ಇವರ ಪೈಕಿ ಬಹುಪಾಲು ಕೃಷಿಕರು ತುಂಡುಭೂಮಿ ಉಳ್ಳವರಾಗಿದ್ದು, ಭೂರಹಿತರೂ ಅಪಾರ ಸಂಖ್ಯೆಯಲ್ಲಿದ್ದಾರೆ. ಈ ಎರಡೂ ವರ್ಗಗಳ ಕೃಷಿಕರು ವರ್ಷದ ಕನಿಷ್ಠ ಆರು ತಿಂಗಳು ನಗರಗಳಲ್ಲಿ ನಿರ್ಮಾಣ ಕಾರ್ಯಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರ ಪಡೆಯಲ್ಲಿ ಕಾಣುತ್ತಾರೆ.

ಸಾಂದರ್ಭಿಕ ಚಿತ್ರ

ಬದಲಾದ ಕಾರ್ಮಿಕ ನೀತಿಗಳು

ಈವರೆಗೂ ಕೇಂದ್ರದಲ್ಲಾಗಲೀ, ರಾಜ್ಯಗಳಲ್ಲಾಗಲೀ ವಲಸೆ ಕಾರ್ಮಿಕರಿಗಾಗಿ ಒಂದು ಸಾಂವಿಧಾನಿಕ ಕಾನೂನು-ನೀತಿಯನ್ನು ಅಧಿಕೃತವಾಗಿ ರೂಪಿಸದೆ ಇರುವುದು ಆಳುವ ವರ್ಗಗಳ ನಿರ್ಲಕ್ಷ್ಯದ ಸಂಕೇತವಾಗಿದೆ. ಒಂದೆಡೆ ಕೇಂದ್ರ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಿದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಿದ್ದರೆ, ಮತ್ತೊಂದೆಡೆ ಸಂಘಟಿತ ಕಾರ್ಮಿಕರ ಬಹುಮುಖ್ಯ ಆಧಾರವಾಗಿದ್ದ ಸಾರ್ವಜನಿಕ ಉದ್ದಿಮೆಗಳು ಮತ್ತು ಸರ್ಕಾರಿ ನೌಕರಿಗಳು ಕ್ರಮೇಣ ಕಣ್ಮರೆಯಾಗುತ್ತಿವೆ. ಹೊಸ ಕಾರ್ಮಿಕ ಸಂಹಿತೆಗಳು ಸಂಘಟನೆಯ ಹಕ್ಕುಗಳನ್ನೇ ಮೊಟಕುಗೊಳಿಸಿದ್ದು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಾರ್ಮಿಕರ ರಕ್ಷಣೆಗಾಗಿಯೇ ರೂಪಿಸಲಾಗಿದ್ದ ಹಲವು ಕಾಯ್ದೆಗಳನ್ನು ಅಪ್ರಸ್ತುತಗೊಳಿಸಲಾಗಿದೆ. ಅತಿ ಹೆಚ್ಚು ಶ್ರಮಿಕರನ್ನೊಳಗೊಂಡ ಗಾರ್ಮೆಂಟ್‌ ಮತ್ತಿತರ ಉದ್ಯಮಗಳ ಕಾರ್ಮಿಕರು ಯಾವುದೇ ನಿರ್ದಿಷ್ಟ ಸಿದ್ಧಾಂತಗಳಿಗೆ ಬದ್ಧರಾಗದೆ ತಮ್ಮ ವೇತನ ಮತ್ತಿತರ ಸೌಲಭ್ಯಗಳಿಗಾಗಿ ಹೋರಾಡುತ್ತಿದ್ದಾರೆ

ಈ ಸಿಕ್ಕುಗಳ, ಸವಾಲುಗಳ ನಡುವೆಯೇ ಭಾರತದ ದುಡಿಯುವ ವರ್ಗ ಮತ್ತೊಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಿದೆ. ಅಧಿಕೃತವಾಗಿ ಸಂಯೋಜಿತವಾಗಿರುವ ಎಡಪಂಥೀಯ ಮತ್ತಿತರ ಕಾರ್ಮಿಕ ಸಂಘಟನೆಗಳು ತಮ್ಮ ಸೈದ್ಧಾಂತಿಕ ಭಿನ್ನಮತ, ಸಂಘಟನಾತ್ಮಕ ಪೈಪೋಟಿ ಮತ್ತು ತಾತ್ವಿಕ ವ್ಯತ್ಯಯಗಳ ಹೊರತಾಗಿಯೂ ಜಂಟಿ ಹೋರಾಟಗಳನ್ನು ಹಮ್ಮಿಕೊಳ್ಳುವ ಮೂಲಕ, ದೇಶದ ದುಡಿಯುವ ವರ್ಗಗಳಿಗೆ ದನಿಯಾಗುತ್ತಿರುವುದು ಮತ್ತು ಸರ್ಕಾರಕ್ಕೆ ಕಾರ್ಮಿಕರ ಬೇಡಿಕೆಗಳನ್ನು ತಲುಪಿಸುತ್ತಿರುವುದು ಸಕಾರಾತ್ಮಕವಾದ ಬೆಳವಣಿಗೆ. ಆದರೆ ಈ ಬೃಹತ್‌ ಶ್ರಮಿಕ ಪಡೆಯ ನಡುವೆಯೇ ಕಳೆದ ಆರೇಳು ದಶಕಗಳ ಫಲಾನುಭವಿಗಳೆಂದು ಗುರುತಿಸಬಹುದಾದ  ಬಿಳಿ ಕಾಲರಿನ, ಮೇಲ್ಪದರದ ಕಾರ್ಮಿಕರು ಮತ್ತು ಸಂಘಟನೆಗಳು, ಶ್ರಮಮಾರುಕಟ್ಟೆಯಲ್ಲಿ ತಳಪಾಯದಲ್ಲಿರುವ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಶ್ರಮಿಕರ ನೋವು, ಸಂಕಟ ಮತ್ತು ಸವಾಲುಗಳಿಗೆ ಮುಕ್ತವಾಗಿ ಸ್ಪಂದಿಸದೆ ಇರುವುದನ್ನು ವಸ್ತುನಿಷ್ಠವಾಗಿ ಪರಾಮರ್ಶಿಸಬೇಕಿದೆ.

1990ರಲ್ಲಿ ಅವಸಾನ ಹೊಂದಿದ ಔದ್ಯೋಗಿಕ ಬಂಡವಾಳಶಾಹಿಯ ಸ್ಥಾನವು ಭಿನ್ನ ನೆಲೆಯಲ್ಲಿ ಆವರಿಸಿಕೊಂಡಿದೆ. ಆಧುನಿಕ ವಿದ್ಯುನ್ಮಾನ ಸಂವಹನ ಮಾಧ್ಯಮಗಳು ಇಡೀ ಶ್ರಮಜೀವಿ ವರ್ಗವನ್ನು ಸಮ್ಮೋಹನಗೊಳಿಸುವ ಮೂಲಕ, ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಬಲಗೊಳ್ಳುತ್ತಿರುವ ಬಲಪಂಥೀಯ ಅಧಿಕಾರ ರಾಜಕಾರಣ ಮತ್ತು ವಿಶೇಷವಾಗಿ ಭಾರತದ ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸುತ್ತಿರುವ ಮತೀಯವಾದ-ಏಕಾಧಿಪತ್ಯದ ನೆಲೆಗಳಲ್ಲಿ, ಸಕ್ರಿಯ ಕಾಲಾಳುಗಳನ್ನಾಗಿ ಪರಿವರ್ತಿಸುತ್ತಿರುವುದನ್ನು ಮೇ ದಿನದ ಸಂದರ್ಭದಲ್ಲಿ ಗಂಭೀರ ಚರ್ಚೆಗೊಳಪಡಿಸಬೇಕಿದೆ. ಭಾರತದ ಕಾರ್ಮಿಕ ಸಂಘಟನೆಗಳ ಇತಿಹಾಸವನ್ನೊಮ್ಮೆ ಇಣುಕಿ ನೋಡಿದಾಗ, ಕಾರ್ಮಿಕ ಚಳುವಳಿಗಳು ಈ ಕಾರ್ಮಿಕರ ಕುಟುಂಬ ಸದಸ್ಯರನ್ನು, ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕಿಸುವ ಪ್ರಯತ್ನಗಳು ನಡೆಯದೆ ಇರುವುದು, ಇಡೀ ಚಳುವಳಿಯ ವೈಫಲ್ಯವಾಗಿಯೇ ಕಾಣಬೇಕಿದೆ.

ಸಂಘಟಿತ ಹೋರಾಟದ ರಾಜಕೀಕರಣ

ಹಾಗಾಗಿಯೇ ಇಂದಿಗೂ ಸಹ ಸಂಘಟಿತ ಕಾರ್ಮಿಕ ಸಂಘಟನೆಗಳಲ್ಲಿ ಕಾಣಲಾಗುವ ಕೊರಗು ಮತ್ತು ಕೇಳಿಬರುವ ಧ್ವನಿಯಲ್ಲಿ  “ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕೆಂಬಾವುಟ ಹಿಡಿಯುತ್ತಾರೆ – ಆದರೆ ಚುನಾವಣೆಗಳಲ್ಲಿ ಕೇಸರಿಯತ್ತ ವಾಲುತ್ತಾರೆ ” ಎಂಬ ಹತಾಶೆಯ ಮಾತುಗಳು ಪ್ರಧಾನವಾಗಿರುತ್ತವೆ. ತಳಮಟ್ಟದಿಂದ ಮೇಲ್ಪದರದವರೆಗಿನ (Ground to the Elite) ಶ್ರಮಿಕರಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಚಳುವಳಿಗಳು ವಿಫಲವಾಗಿವೆ. ಈ ವಾದ ಚರ್ಚಾಸ್ಪದವಾಗಿ ಕಾಣಬಹುದಾದರೂ, ವರ್ತಮಾನ ಭಾರತ ಎದುರಿಸುತ್ತಿರುವ ಮತೀಯ ರಾಜಕಾರಣ, ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಎಲ್ಲ ವರ್ಗಗಳಲ್ಲೂ ಆವರಿಸುತ್ತಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳು ನಮ್ಮನ್ನು ಈ ಚರ್ಚೆಯೆಡೆಗೆ ಕೊಂಡೊಯ್ಯಬೇಕಿದೆ. ಮಂಗಳೂರಿನಲ್ಲಿ ವಲಸೆ ಕಾರ್ಮಿಕನ ಹತ್ಯೆಯಾಗಿರುವುದರ ಹಿಂದೆ ಇದೇ ಮತಾಂಧತೆಯ ಛಾಯೆ ಅಡಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇದು ಶ್ರಮಜೀವಿ ವರ್ಗದ ರಾಜಕೀಕರಣದ ( Politicisation) ಹಾದಿಯಲ್ಲಿ ಸಂಘಟಿತ ಕಾರ್ಮಿಕ ಚಳುವಳಿಗಳ ಮುಂದಿರುವ ಬಹುದೊಡ್ಡ ಸವಾಲು ಎನಿಸುವುದಿಲ್ಲವೇ?  ಹಾಗೆನಿಸುವುದೇ ಆದರೆ ಇದಕ್ಕೆ ಪರಿಹಾರವೇನು? ಕೇವಲ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಾ ನಡೆಯುವುದೇ ಅಥವಾ ಇನ್ನೂ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿದಿರುವ ಸಂಘಟಿತ ಕಾರ್ಮಿಕರ ಉತ್ತಮ ಭವಿಷ್ಯಕ್ಕಾಗಿ ಸರ್ಕಾರವನ್ನು ಒತ್ತಾಯಿಸುತ್ತಾ ಕಾಲ ಕಳೆಯುವುದೇ ? ಒಂದು ನೆಲೆಯಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನೇ ಪ್ರತಿನಿಧಿಸುವ ಎಲ್ಲ ಸರ್ಕಾರಗಳೂ, ಈ ಬೇಡಿಕೆಗಳಿಗೆ ಸಮ್ಮತಿಸಿಬಿಡುತ್ತವೆ, ಅಥವಾ ಗ್ಯಾರಂಟಿ ಯೋಜನೆಗಳಂತಹ ಕಲ್ಯಾಣ ಕಾರ್ಯಕ್ರಮಗಳನ್ನೇ ( Welfare programmes) ಸಮ ಸಮಾಜ-ಸಮಾಜವಾದದ ಅಂತಿಮ ಘಟ್ಟ ಎಂದು ವಾದಿಸುತ್ತಾ ಇಡೀ ಸಮಾಜವನ್ನು ಭ್ರಮಾಧೀನಗೊಳಿಸುತ್ತವೆ. ಆದರೆ ನಿತ್ಯ ಬದುಕಿನ ತಾತ್ಕಾಲಿಕ ಸಮಸ್ಯೆಗಳಿಗೆ ನೀಡುವ ಈ ಶಮನಕಾರಿ ಚಿಕಿತ್ಸೆ, ಭವಿಷ್ಯದ ಸಮಾಜಕ್ಕೆ ಒಂದು ಸುಭದ್ರ, ಸುರಕ್ಷಿತ, ಆರೋಗ್ಯಕರ ಅಡಿಪಾಯವನ್ನು ನಿರ್ಮಿಸಲು ಸಾಧ್ಯವೇ ?

ಸಾಂದರ್ಭಿಕ ಚಿತ್ರ

ಈ ಪ್ರಶ್ನೆ ಎಡಪಂಥೀಯ ಕಾರ್ಮಿಕ ಸಂಘಟನೆಗಳನ್ನು ಕಾಡಲೇಬೇಕಲ್ಲವೇ ? ಮೇ ದಿನದ ಕರಪತ್ರಗಳಲ್ಲಿ ಈ ಸವಾಲುಗಳು ಪ್ರಸ್ತಾಪವಾಗುತ್ತವೆ, ಕಾರ್ಮಿಕರ ಮೆರವಣಿಗೆಗಳಲ್ಲಿ, ಸಾರ್ವಜನಿಕ ಸಮಾವೇಶಗಳ ಘೋಷಣೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇದು ರಾಜಕೀಕರಣದಿಂದ (Politicisation) ವಿಮುಖವಾಗಿಯೇ ಸಾಗುವ ಒಂದು ಮಾರ್ಗ. ಸಂಘಟಿತ-ಅಸಂಘಟಿತ ಕಾರ್ಮಿಕರ, ಇದರಿಂದ ಇಂದಿಗೂ ಹೊರಗಿರುವ ಅಸಂಖ್ಯಾತ ಶ್ರಮಜೀವಿಗಳ ಭವಿಷ್ಯದ ಹಾದಿಗಳು ಹಸನಾಗಬೇಕಾದರೆ, ಈ ಶ್ರಮಜಗತ್ತಿನಲ್ಲಿ ರಾಜಕೀಯ ಪ್ರಜ್ಞೆ  ಬೆಳೆಸಬೇಕು. ಈ ಪ್ರಜ್ಞೆ ಮತ್ತು ಅರಿವಿನ ಹಾದಿಯಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಬಹುತ್ವ ಮತ್ತು ಸಾಂವಿಧಾನಿಕ ನೈತಿಕತೆಯ ಮೌಲ್ಯಗಳ ಬೀಜಗಳನ್ನು ಬಿತ್ತಬೇಕು.  ಇದರೊಂದಿಗೆ ಜಾತಿದ್ವೇಷ, ಮತದ್ವೇಷ, ಧರ್ಮದ್ವೇಷ ಮತ್ತು ಸ್ತ್ರೀ ದ್ವೇಷದ (Mysoginist ) ಕಳೆಗಳನ್ನು ಕಿತ್ತೊಗೆಯಬೇಕು. ನವ ಭಾರತ ಮತ್ತೊಮ್ಮೆ ಮಧ್ಯಕಾಲೀನತೆಗೆ (Medievalism)  ಜಾರದ ಹಾಗೆ, ನಂಬಿಕೆ ಶ್ರದ್ಧಾಚರಣೆಗಳ ನೆಪದಲ್ಲಿ ಪ್ರಾಚೀನ ಮೌಲ್ಯಗಳ ಕೂಪಕ್ಕೆ ಬೀಳದ ಹಾಗೆ, ಈ ಹಾದಿಯ ಹಾಸುಗಲ್ಲುಗಳನ್ನು (Mosaic) ವಿಸ್ತರಿಸಬೇಕಿದೆ.

ಇದು ಸಾಧ್ಯವಾಗುವುದಾದರೆ, ಮೇ ದಿನದ ಆಚರಣೆಯೂ ಸಾರ್ಥಕವಾಗುತ್ತದೆ.

ಸಮಸ್ತ ಕಾರ್ಮಿಕರಿಗೂ ಮೇ ದಿನದ ಶುಭಾಶಯಗಳು

ನಾ. ದಿವಾಕರ
ಚಿಂತಕರು


ಇದನ್ನೂ ಓದಿ- ಕಾರ್ಮಿಕರ ದಿನಾಚರಣೆ | ಕಾರ್ಮಿಕರ ಹಕ್ಕುಗಳನ್ನು ನೆನಪಿಸುವ ಮೇ ದಿನ

More articles

Latest article