ವಿಜಯಪುರ: ವಿಆರ್‌ ಎಲ್‌ ಬಸ್, ಲಾರಿಗೆ ಕಾರು ಡಿಕ್ಕಿ, ಆರು ಮಂದಿ ಸ್ಥಳದಲ್ಲೇ ಸಾವು

Most read

ವಿಜಯಪುರ: ವಿಜಯಪುರ ನಗರದ ಸಮೀಪದ ಮನಗೂಳಿ ಎಂಬಲ್ಲಿ ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ- 50 ರ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸಾವಿಗೀಡಾಗಿದ್ದಾರೆ.

ಮಹಿಂದ್ರಾ ಸ್ಕಾರ್ಪಿಯೋ ಕಾರಿನಲ್ಲಿದ್ದ ತೆಲಂಗಾಣದ ಗಡವಾಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಹಾಗೂ ಅವರ ಪತ್ನಿ ಪವಿತ್ರಾ, ಮಗಳು ಜೋಸ್ನಾ, ಮಹೀಂದ್ರಾ ಸ್ಕಾರ್ಪಿಯೋ ಚಾಲಕ ವಿಜಯಪುರ ಜಿಲ್ಲೆಯ ಹೊರ್ತಿಯ ವಿಕಾಸ ಶಿವಪ್ಪ ಮಕನಿ ಹಾಗೂ ವಿಆರ್‌ಎಲ್ ಬಸ್ ಚಾಲಕ ಕಲಗುಟಗಿ ತಾಂಡಾದ ಬಸವರಾಜ ರಾಠೋಡ ಸ್ಥಳದಲ್ಲೇ ಅಸುನೀಗಿದ್ದಾರೆ.

ಮಹಾರಾಷ್ಟ್ರದ ನೋಂದಣಿ (ಎಂ.ಎಚ್.13 ಬಿಎನ್ 8364) ಇರುವ ಮಹೀಂದ್ರಾ ಸ್ಕಾರ್ಪಿಯೋ ಮತ್ತು ವಿಆರ್‌ ಎಲ್ ಬಸ್ (ಎಂ.ಎಚ್.12 ವಿಟಿ 7982) ಹಾಗೂ ಲಾರಿ (ಕೆಎ 22 ಎಎ 3117) ನಡುವೆ ಸರಣಿ ಅಪಘಾತ ಸಂಭವಿಸಿದೆ.

ಭಾಸ್ಕರನ್ ಅವರ ಪುತ್ರ ಪ್ರವೀಣತೇಜ ಹಾಗೂ ಲಾರಿ ಚಾಲಕ ಹುಲಜಂತಿಯ ಚನ್ನಬಸು ಸಿದ್ದಪ್ಪ ಮಾಳಿ ಗಾಯಗೊಂಡಿದ್ದು, ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಲಾಪುರ ಕಡೆಗೆ ತೆರಳುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ಕಾರು ಮೊದಲು ಡಿವೈಡರ್‌ ಗೆ ಡಿಕ್ಕಿ ಹೊಡೆದು ನಂತರ ಮುಂಬೈನಿಂದ ಬಳ್ಳಾರಿಗೆ ತೆರಳುತ್ತಿದ್ದ ವಿಆರ್‌ಎಲ್ ಬಸ್‌ಗೆ ಡಿಕ್ಕಿ ಹೊಡೆದು ಇದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಗೂ ಗುದ್ದಿದೆ. ಪರಿಣಾಮ ಸ್ಕಾರ್ಪಿಯೋದಲ್ಲಿದ್ದ ಐವರು ಹಾಗೂ ಬಸ್ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ವಾಹನಗಳಲ್ಲಿ ಸಿಲುಕಿಕೊಂಡಿರುವ ಶವಗಳನ್ನು ಹೊರತೆಗೆದು ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

More articles

Latest article