ಮದುವೆಯಾಗುವುದಾಗಿ ನಂಬಿಸಿ ರೂ.80 ಲಕ್ಷ ವಂಚಿಸಿದ ಯುವತಿ: ದೂರು ದಾಖಲಿಸಿದ ಐಟಿ ಉದ್ಯೋಗಿ

Most read

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ವೆಬ್‌ ಸೈಟ್‌ ಮೂಲಕ ಪರಿಚಯ ಮಾಡಿಕೊಂಡು ವಿವಾಹವಾಗುವುದಾಗಿ ನಂಬಿಸಿ ಐಟಿ ಕಂಪನಿ ಉದ್ಯೋಗಿಯೊಬ್ಬರಿಗೆ ಯುವತಿಯೊಬ್ಬಳು ವಂಚಿಸಿರುವ ಪ್ರಕರಣ ಕುರಿತು ದೂರು ದಾಖಲಾಗಿದೆ.

ರಾಮಮೂರ್ತಿ ನಗರದ ನಿವಾಸಿ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ದೂರು ದಾಖಲಿಸಿದ್ದು, ಆ ದೂರಿನ ಅನ್ವಯ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 318ರ (ವಂಚನೆ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ತನ್ನನ್ನು ವಿಶಾಖಪಟ್ಟಣದ ರೋಹಿಣಿ ವರ್ಮಾ ಎಂದು ಪರಿಚಯಿಸಿಕೊಂಡಿದ್ದ ಯುವತಿ, ಇಂಗ್ಲೆಂಡ್‌ನ ಟ್ರೇಡಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿರುವುದಾಗಿ ಹೇಳಿಕೊಂಡಿದ್ದಳು. ಆರು ತಿಂಗಳಲ್ಲಿ ಭಾರತಕ್ಕೆ ಬರಲಿದ್ದು ಆಗ ಮದುವೆ ಕುರಿತು ಚರ್ಚಿಸೋಣ ಎಂದು ನಂಬಿಸಿದ್ದಳು. ನಂತರ ಇಬ್ಬರೂ ಮೊಬೈಲ್‌ ಮತ್ತು ವಾಟ್ಸಾಪ್‌ ಮೂಲಕ ಸಂಭಾಷಿಸುತ್ತಿದ್ದರು.

ಭಾರತ ಹಾಗೂ ಇಂಗ್ಲೆಂಡ್‌ ನ ಎರಡು ಪ್ರತ್ಯೇಕ ಸಂಖ್ಯೆಗಳಿಂದ ವಂಚಕಿ ಕರೆ ಮಾಡುತ್ತಿದ್ದಳು. ತಾನು ಕೆಲಸ ಮಾಡುತ್ತಿರುವ ಟ್ರೇಡಿಂಗ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹದು ಎಂಬ ಆಸೆ ಹುಟ್ಟಿಸಿದ್ದಳು. ಲಾಭದ ಹಣದಿಂದ ಮದುವೆಯಾಗಿ ಇಬ್ಬರೂ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ನಂಬಿಸಿದ್ದಳು. ಆಕೆಯ ಮಾತು ನಂಬಿ ಸಾಫ್ಟ್‌ ವೇರ್ ಎಂಜಿನಿಯರ್, 2025ರ ಫೆಬ್ರುವರಿಯಿಂದ ಹಂತ ಹಂತವಾಗಿ ರೂ.80 ಲಕ್ಷ ಹೂಡಿಕೆ ಮಾಡಿದ್ದರು. ಯುವತಿ ನೀಡಿದ್ದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಬಳಿಕ ಸಾಫ್ಟ್‌ ವೇರ್ ಎಂಜಿನಿಯರ್ ಲಾಭದ ಹಣವನ್ನು ತೆಗೆದುಕೊಳ್ಳಲು ಮುಂದಾಗಿದ್ದರು. ತೆರಿಗೆ ಹಾಗೂ ಶುಲ್ಕ ಹಣವನ್ನು ಪಾವತಿಸುವಂತೆ ಸೂಚಿಸಲಾಗಿತ್ತು. ಆಗ ಅವರಿಗೆ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದು ದೂರು ಸಲ್ಲಿಸಿದ್ದಾರೆ. ಜೂನ್ 19ರ ಬಳಿಕ ಯುವತಿ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

More articles

Latest article