ಔರಾದ್: ಔರಾದ್ ಬಿಜೆಪಿ ಶಾಸಕ ಪ್ರಭು ಚವಾಣ್, ಅವರ ಪುತ್ರಪ್ರತೀಕ್ ಚವಾಣ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಮದುವೆಯನ್ನು ರದ್ದುಪಡಿಸಿದ್ದಕ್ಕಾಗಿ ಮಹಾರಾಷ್ಟ್ರದ ದೇಗಲೂರ ತಾಲ್ಲೂಕಿನ ಸೇವಾದಾಸ ನಗರ ತಾಂಡಾದ ಯುವತಿಯೊಬ್ಬರು ರಾಜ್ಯ ಮಹಿಳಾ ಆಯೋಗ ಹಾಗೂ ರಾಜ್ಯದ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದಾರೆ.
2023ರ ಡಿಸೆಂಬರ್ 25ರಂದು ಔರಾದ್ ತಾಲ್ಲೂಕಿನ ಬೋಂತಿಯ ಘಮಸುಬಾಯಿ ತಾಂಡಾದಲ್ಲಿ ಶಾಸಕ ಪ್ರಭು ಚವಾಣ್ ಅವರ ಪುತ್ರ ಪ್ರತೀಕ್ ಚವಾಣ್ ಹಾಗೂ ನನಗೆ ವಿವಾಹ ನಿಶ್ಚಿತಾರ್ಥವಾಗಿದೆತ್ತು. ಪ್ರತೀಕ್ ತಂದೆ ಪ್ರಭು ಚವಾಣ್ ಮತ್ತು ಅವರ ಕುಟುಂಬದವೆಲ್ಲರೂ ಸಮಾರಂಭದಲ್ಲಿ ಹಾಜರಿದ್ದರು. ನಿಶ್ಚಿತಾರ್ಥದ ನಂತರ ನಾವಿಬ್ಬರೂ ಮಹಾರಾಷ್ಟ್ರದ ದೇವಸ್ಥಾನ ಸೇರಿದಂತೆ ವಿವಿಧ ಭಾಗಗಳಿಗೆ ಹೋಗಿದ್ದೆವು. ಈ ಸಂದರ್ಭದಲ್ಲಿ ಪ್ರತೀಕ್ ನನ್ನ ಜತೆ ದೈಹಿಕ ಸಂಬಂಧ ಬೆಳೆಸಿದ್ದಾರೆ. ನನ್ನ ಪೋಷಕರು ಮದುವೆ ಸಂಬಂಧ ಮಾತನಾಡಲು ಹೋದಾಗ ಅವರೊಂದಿಗೆ ಜಗಳವಾಡಿದ್ದಾರೆ. ದೂರು ಕೊಡಲು ಹೋದರೆ ಪೊಲೀಸರು ಸ್ವೀಕರಿಸಿಲ್ಲ. ನನ್ನ ಹಾಗೂ ನನ್ನ ಕುಟುಂಬಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ದೂರಿನಲ್ಲಿ ಆಗ್ರಹಪಡಿಸಿದ್ದಾರೆ.
ಶಾಸಕ ಪ್ರಭು ಚವಾಣ್ ಪ್ರತಿಕ್ರಿಯಿಸಿ ನನ್ನ ಹಾಗೂ ಕುಟುಂಬದ ವೈಯಕ್ತಿಕ ಮಾನಹಾನಿಗೆ ಷಡ್ಯಂತ್ರ ನಡೆಸಲಾಗುತ್ತಿದೆ. ನಿಶ್ಚಿತಾರ್ಥ ಸಮಸ್ಯೆಯನ್ನು ಎರಡೂ ಕುಟುಂಬದವರು ಕುಳಿತು ಬಗೆಹರಿಸಿಕೊಂಡಿದ್ದೇವೆ. ಆದರೆ, ಕೆಲವರು ಅವರನ್ನು ಎತ್ತಿ ಕಟ್ಟುತ್ತಿದ್ದಾರೆ. ಅವರನ್ನು ಬೆಂಗಳೂರಿಗೆ ಕರೆದೊಯ್ದು ದೂರು ಕೊಡಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.