ಇಂದಿನಿಂದ ಸಂಸತ್‌ ಅಧಿವೇಶನ ಆರಂಭ: ಪಹಲ್ಗಾಮ್‌, ಆಪರೇಷನ್ ಸಿಂಧೂರ ಚರ್ಚೆಗೆ ಪಟ್ಟು: ಕಲಾಪ ಮುಂದೂಡಿಕೆ

Most read

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭವಾಗಿದೆ. ಮೊದಲ ದಿನವೇ  ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಚರ್ಚೆಗೆ ಪಟ್ಟು ಹಿಡಿದ ಕಾರಣ ಉಭಯ ಸದನಗಳನ್ನು ಕೆಲ ಹೊತ್ತಿಗೆ ಮುಂದೂಡಲಾಗಿದೆ.

ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಏರ್ ಇಂಡಿಯಾ AI-171 ವಿಮಾನ ಪತನದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ, ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿ ಪಕ್ಷಗಳ ಸದಸ್ಯರು, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಆಪರೇಷನ್ ಸಿಂದೂರ ಕುರಿತು ಚರ್ಚೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು

ಸ್ಪೀಕರ್ ಓಂ ಬಿರ್ಲಾ  ಮಾತನಾಡಿ, ಸರ್ಕಾರ ಪ್ರತಿಯೊಂದು ವಿಷಯಕ್ಕೂ ಉತ್ತರಿಸಲು ಬಯಸುತ್ತದೆ. ನೀವು ಘೋಷಣೆಗಳನ್ನು ಕೂಗಲು ಇಲ್ಲಿಗೆ ಬಂದಿಲ್ಲ. ಸದನವು ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ನಿಯಮಗಳ ಪ್ರಕಾರ ಎತ್ತಲಾದ ಎಲ್ಲಾ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರಾದರೂ ವಿಪಕ್ಷಗಳು ಅವರ ಮಾತನ್ನು ಕೇಳಲಿಲ್ಲ.

ಪ್ರಶ್ನೋತ್ತರ ಅವಧಿಯ ನಂತರ ನೀವು ಬಯಸುವ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಲು ನಿಮಗೆ ಅವಕಾಶ ಮಾಡಿಕೊಡುತ್ತೇನೆ. ಆದರೆ ಘೋಷಣೆಗಳನ್ನು ಕೂಗಲು ಮತ್ತು ಫಲಕಗಳನ್ನು ಪ್ರದರ್ಶಿಸಲು ಅನುಮತಿ ನೀಡುವುದಿಲ್ಲ ಎಂದು ಕಿಡಿ ಕಾರಿದರು.

ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಗಳನ್ನು ಮುಂದುವರೆಸಿದ್ದರಿಂದ ಕಲಾಪವನ್ನು ಮುಂದೂಡಲಾಯಿತು. ಈಸಂದರ್ಭದಲ್ಲಿ ಪ್ರಧಾನಿ ಮೋದಿ ಸದನದಲ್ಲಿ ಹಾಜರಿದ್ದರು.

ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಚರ್ಚೆ ನಡೆಯಬೇಕು ಎಂದು ಪ್ರತಿಪಕ್ಷಗಳು ನಿಲುವಳಿ ಸೂಚನೆ ಮಂಡಿಸಿವೆ.

More articles

Latest article