ಇಂಫಾಲ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಹೆಸರಿನಲ್ಲಿ ಮಣಿಪುರದ ಹಲವು ಶಾಸಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಿಸುವ ಭರವಸೆ ನೀಡಿ, ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ಬಳಿಕ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಇದೇ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಆರೋಪಿಗಳು, ಮಣಿಪುರದ ಹಲವು ಶಾಸಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಅಮಿತ್ ಶಾ ಮಗ ಜಯ್ ಶಾರಂತೆ ಪರಿಚಯಿಸಿಕೊಂಡಿದ್ದರು. ರೂ. 4 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಿಸುವುದಾಗಿ ತಿಳಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐ ಆರ್ ಗಳು ದಾಖಲಾಗಿದ್ದವು. ತನಿಖೆ ಆರಂಭಿಸಿದ ಪೊಲೀಸರು ಉತ್ತರಾಖಂಡದಲ್ಲಿದ್ದ ಆರೋಪಿಗಳನ್ನು ಇಂಫಾಲಕ್ಕೆ ಕರೆ ತರಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶದ ಇಟಾ ಜಿಲ್ಲೆಯ ಉವೈಶ್ ಅಹ್ಮದ್, ದೆಹಲಿಯ ಘಾಜಿಪುರದ ಗೌರವ್ ನಾಥ್ ಮತ್ತು ಪ್ರಿಯಾನ್ಸು ಪಂತ್ ಎಂದು ಗುರುತಿಸಲಾಗಿದೆ. ಫೆಬ್ರವರಿ 13ರಂದು ಬಿರೇನ್ ಸಿಂಗ್ ರಾಜೀನಾಮೆ ನೀಡಿದರು. ಫೆಬ್ರುವರಿ 13ರಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.