ಇಂಫಾಲ್: ರಾಜ್ಯದಲ್ಲಿ 250ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಜನಾಂಗೀಯ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮಂಗಳವಾರ ರಾಜ್ಯದ ಜನತೆಯ ಕ್ಷಮೆಯಾಚಿಸಿದ್ದಾರೆ. ಈ ಘಟನೆ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ್ದು, ರಾಜ್ಯದ ಜನತೆ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಿ, ಶಾಂತಿಯುತವಾಗಿ ಎಲ್ಲರೂ ಒಟ್ಟಾಗಿ ಬದುಕಬೇಕು ಎಂದು ಎಲ್ಲಾ ಸಮುದಾಯಗಳಿಗೆ ಅವರು ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿರೇನ್ ಸಿಂಗ್, ರಾಜ್ಯದಲ್ಲಿ ನಡೆದಿರುವ ಘಟನೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ. ಈ ಸಂಘರ್ಷದಲ್ಲಿ ಹಲವು ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರೆ, ಅನೇಕ ಜನರು ತಮ್ಮ ಮನೆಗಳನ್ನು ತೊರೆಯಬೇಕಾಯಿತು. ಇದಕ್ಕಾಗಿ ನಾನು ವಿಷಾದಿಸುತ್ತೇನೆ. ಈ ನಡುವೆ ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಶಾಂತಿ ಮರಳುತ್ತಿದ್ದು, ಮುಂಬರುವ ವರ್ಷದಲ್ಲಿ ಸಹಜ ಸ್ಥಿತಿಗೆ ಮರಳುವ ಭರವಸೆಯನ್ನು ನೀಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನು ನಡೆದಿಯೋ ಅದು ನಡೆದಾಗಿದೆ. ನಮ್ಮ ಹಿಂದಿನ ತಪ್ಪುಗಳನ್ನು ಮರೆತು ಕ್ಷಮಿಸಬೇಕು. ಶಾಂತಿ ಮತ್ತು ಸಮೃದ್ಧ ಮಣಿಪುರದಲ್ಲಿ ಒಟ್ಟಿಗೆ ವಾಸಿಸುವ ಮೂಲಕ ಜೀವನವನ್ನು ಹೊಸದಾಗಿ ಪ್ರಾರಂಭಿಸೋಣ ಎಂದು ನಾನು ಎಲ್ಲಾ ಸಮುದಾಯಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಸಂಘರ್ಷ ಪ್ರಾರಂಭವಾದ ದಿನಗಳಿಗೆ ಹೋಲಿಸಿದರೆ ಕಳೆದ 20 ತಿಂಗಳಿನಲ್ಲಿ ರಾಜ್ಯದಲ್ಲಿ ಗುಂಡಿನ ದಾಳಿ ಪ್ರಕರಣಗಳು ಇಳಿಮುಖವಾಗಿವೆ. 2023ರಲ್ಲಿ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ 408 ಗುಂಡಿನ ದಾಳಿ ಪ್ರಕರಣಗಳು ವರದಿಯಾದರೆ, ಅದೇ ವರ್ಷ ನವೆಂಬರ್‌ನಿಂದ ಏಪ್ರಿಲ್‌ವರೆಗೆ 345 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಮೇ ತಿಂಗಳಿಂದ ಇಲ್ಲಿಯವರೆಗೆ 112 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ. ಇದೇ ಅವಧಿಯಲ್ಲಿ ಉಗ್ರರು ಲೂಟಿ ಮಾಡಿದ್ದ ಶಸ್ತ್ರಾಸ್ತ್ರಗಳಲ್ಲಿ 3,112 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, 2,511 ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದುವರೆಗೆ 625 ಜನರನ್ನು ಬಂಧಿಸಲಾಗಿದೆ ಮತ್ತು 12,047 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದೂ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.