ಸಾಂವಿಧಾನಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವ ಪ್ರಣಾಳಿಕೆ

Most read

ಭಾರತದ ಒಕ್ಕೂಟ ರಚನೆಯನ್ನು ಮತ್ತಷ್ಟು ಬಲಗೊಳಿಸುತ್ತ, ಜನರ ಸರ್ವೋತೋಮುಖ ಅಭಿವೃದ್ಧಿ, ಹಾಗೂ ದೇಶದ ಜಿಡಿಪಿಯನ್ನು ದ್ವಿಗುಣ ಗೊಳಿಸುವ, ಉತ್ಪಾದನೆಯನ್ನು ಉತ್ತೇಜಿಸುವ  ನವ ಸಂಕಲ್ಪವನ್ನು ಹೊಂದಿರುವ ಆರ್ಥಿಕತೆಯ ಸುತ್ತ ಹೆಣೆದಿರುವ 5 ನ್ಯಾಯಗಳು,25 ಗ್ಯಾರಂಟಿಗಳು ಜಾರಿಗೆ ಬಂದರೆ ಭಾರತದ ಪ್ರಜೆಗಳ ಗೆಲುವದು. – ಸುಚಿತ್ರಾ ಎಸ್‌ ಎ, ವಕೀಲರು ಹಾಗೂ  ರಾಜಕೀಯ ವಿಶ್ಲೇಷಕರು

 ಚುನಾವಣಾ ಪ್ರಣಾಳಿಕೆಗಳು ರಾಜಕೀಯ ಪಕ್ಷಗಳ ಆಶಯವನ್ನು ಜನರ ಮುಂದಿಡುವ ಒಂದು ನೀಲಿ ನಕ್ಷೆ. ಇವತ್ತು ಬಹುಮಟ್ಟಿಗೆ ಎಲ್ಲಾ ರಾಜಕೀಯ ಪಕ್ಷಗಳು ಈ ದಾಖಲೆಗಳನ್ನು ಯಥಾವತ್ತಾಗಿ ಚುನಾವಣೆಗೆ ಮುಂಚಿತವಾಗಿ ಸಲ್ಲಿಸುವ ಕ್ರಮಬದ್ಧತೆ ಇಟ್ಟುಕೊಂಡಿರುವುದನ್ನು ನಾವು ಕಾಣಬಹುದು. ಈ ದಾಖಲೆ ಒಂದು ರಾಜಕೀಯ ಪಕ್ಷ ಒತ್ತು ನೀಡುವ ವಿಷಯಗಳ ಬಗ್ಗೆ ವಿವರಿಸುತ್ತದೆ. ಚುನಾವಣಾ ಪ್ರಣಾಳಿಕೆಯು ರಾಜಕೀಯ ಪಕ್ಷ ತಮ್ಮ ಉದ್ದೇಶಗಳು, ದೃಷ್ಟಿಕೋನಗಳನ್ನು ವಿವರಿಸುವ ಸಾರ್ವಜನಿಕ ಹೇಳಿಕೆಯಾಗಿದೆ. ಇದು ಪಕ್ಷದ ದೃಷ್ಟಿಕೋನ ಮತ್ತು ಮತದಾರರಿಗೆ ಪಕ್ಷವೊಂದು ನೀಡುವ ಭರವಸೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಣಾಳಿಕೆಗಳು ಸಾಮಾನ್ಯವಾಗಿ ಸಮಾಜದ ವಿವಿಧ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮಗಳು ಮತ್ತು ಪ್ರತಿಜ್ಞೆಗಳನ್ನು ಒಳಗೊಂಡಿರುತ್ತವೆ.

ಕೆಲಸ, ಸಂಪತ್ತು, ಕಲ್ಯಾಣ (Work, Wealth, Welfare) ಇದು ಕಾಂಗ್ರೆಸ್ ಪಕ್ಷದ ೨೦೨೪ ಪ್ರಣಾಳಿಕೆಯ ಮೂಲಾಂಶ. ಪ್ರಣಾಳಿಕೆ ಭಾರತೀಯರಲ್ಲಿ ಕೇಳುತ್ತಿರುವ ಮೂಲಭೂತ ಪ್ರಶ್ನೆ: ನಿಮ್ಮ ಜೀವನವು 2014 ರಲ್ಲಿದ್ದಕ್ಕಿಂತ ಇಂದು ಉತ್ತಮವಾಗಿದೆಯೇ? 40 % ನಿರುದ್ಯೋಗ (IIT Bombay, IIT Madras, IIT Kanpur ಅಂತಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಲ್ಲಿ ಕೂಡ 30% ವಿದ್ಯಾರ್ಥಿಗಳು placement ಪಡೆಯಲು ಒದ್ದಾಡುತ್ತಿರುವ ಪರಿಸ್ಥಿತಿ ಇಂದಿದೆ), ವಿಪರೀತ ಬೆಲೆ ಏರಿಕೆ, ಹೆಚ್ಚಾಗಿರುವ ಆರ್ಥಿಕ/ಆದಾಯದ ಅಸಮಾನತೆ, ಅಪರಾಧ ಸಂಖ್ಯೆಗಳ ಹೆಚ್ಚಳ, ಆಂತರಿಕ ಕಲಹಗಳ ಹೆಚ್ಚಳ (ಮಣಿಪುರ, ಲಡಾಖ್), ಹೆಚ್ಚುತ್ತಿರುವ ಕೋಮು ದ್ವೇಷ – ಈ ಎಲ್ಲದರ ನಡುವೆ ಈ ಪ್ರಶ್ನೆ ಇವತ್ತು ತುಂಬಾ ಪ್ರಸ್ತುತ.

ಪ್ರಾಯಶ: ಪ್ರತೀ ಪ್ರಜೆಯೂ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೊದಲು ಕೇಳಲೇ ಬೇಕಾದ ಪ್ರಶ್ನೆ ಇದು. ಪ್ರಜಾಪ್ರಭುತ್ವದ ಉನ್ನತಿಗೆ ಪ್ರಜ್ಞಾವಂತ ಪ್ರಜೆಗಳು ಪ್ರಮುಖ ಪ್ರಶ್ನೆಗಳನ್ನು ಕೇಳುವುದು ಅತ್ಯವಶ್ಯ ಎನ್ನುವುದನ್ನು ಬಹಳಷ್ಟು ಜನ ಅರಿಯದೆ ಇರುವುದೇ ನಮ್ಮ ದೇಶದ ದುಸ್ಥಿತಿಗೆ ಕಾರಣ.

“ನ್ಯಾಯ ಪತ್ರ” – ಇದು ೨೦೨೪ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆ ಮಾಡಿದ 45 ಪುಟಗಳ ಚುನಾವಣಾ ಪ್ರಣಾಳಿಕೆ. ಇದರಲ್ಲಿ ನ್ಯಾಯದ ಐದು ಸ್ತಂಭಗಳು ಮತ್ತು 25 ಖಾತರಿಗಳ ಪ್ರಸ್ತಾಪ ಇದೆ. ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ ನ್ಯಾಯ’ ಮತ್ತು ‘ಹಿಸ್ಸೆದಾರಿ ನ್ಯಾಯ’ ಎನ್ನುವ 5 ನ್ಯಾಯಗಳ ಬಗ್ಗೆ ಈ ನ್ಯಾಯ ಪತ್ರ ಉಲ್ಲೇಖಿಸುತ್ತದೆ. ಬಹುಶ ಎಲ್ಲರಿಗೂ ಒಂದಲ್ಲ ಒಂದು ಸವಲತ್ತು, ಯೋಜನೆ ನೀಡುತ್ತಾ, ಎಲ್ಲರ ಒಳಿತನ್ನು ಗಮನದಲ್ಲಿ ಇಟ್ಟುಕೊಂಡು ರಚಿಸಿದ ಪ್ರಣಾಳಿಕೆ ಇದು ಎಂದರೆ ತಪ್ಪಾಗಲಾರದು.

ಸಮಪಾಲು ಸಮಬಾಳು: ಬಡ, ಮಧ್ಯಮ, ಉನ್ನತ ವರ್ಗದಿಂದ ಹಿಡಿದು, ರೈತರು, ಕೂಲಿ ಕಾರ್ಮಿಕ, ಅಂಗನವಾಡಿ/ಆಶಾ ಕಾರ್ಯಕರ್ತೆಯರು, ಮೀನುಗಾರರು, ಬಡಗಿ, ದಿನ ಉದ್ಯೋಗಿ, ಮಹಿಳೆ, ವಿದ್ಯಾರ್ಥಿ, ಗಿಗ್ ವರ್ಕರ್ಸ್, SC/ST/OBC/EWS ಹೀಗೆ ದೇಶದ ಪ್ರತಿಯೋರ್ವರ, ಪ್ರತೀ ರಾಜ್ಯದ  ಸಮಸ್ಯೆಯನ್ನೂ,  ಉನ್ನತಿಯನ್ನೂ ಮನದಲ್ಲಿ ಇಟ್ಟುಕೊಂಡು ಅವರೆಲ್ಲರ ಏಳಿಗೆಗಾಗಿ ಒಂದಲ್ಲ ಒಂದು ಯೋಜನೆ ಇರುವಂತಹ ಪ್ರಣಾಳಿಕೆ. ಸಮತೆ, ಯುವಜನತೆ, ರೈತ, ಮಹಿಳೆ, ಶ್ರಮಿಕ, ಸಂವಿಧಾನ ಹೀಗೆ  ಇನ್ನಿತರ  ಒಟ್ಟು 10 ಅಂಶಗಳನ್ನು ಬಹಳ ಯಥಾವತ್ತಾಗಿ ಮನದಲ್ಲಿ ಇಟ್ಟುಕೊಂಡು, ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ಉದಾರ ಭಾರತದ ಉದ್ದೇಶ ಇರಿಸಿಕೊಂಡಿರುವ ಪ್ರಣಾಳಿಕೆ ಇದು.

ಉದ್ಯೋಗ ಮತ್ತು ವೇತನ: ಪ್ರತಿ ಡಿಪ್ಲೊಮಾ ಹೊಂದಿರುವವರು ಅಥವಾ 25 ವರ್ಷಗಳ ಕೆಳಗಿನ ಪದವೀಧರರಿಗೆ ಅಪ್ರೆಂಟಿಸ್‌ ಶಿಪ್ ಹಕ್ಕು; ಸರ್ಕಾರಿ ಹುದ್ದೆಗಳಲ್ಲಿ 30 ಲಕ್ಷ ಖಾಲಿ ಹುದ್ದೆಗಳ ಭರ್ತಿ; ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ೫೦% ಮೀಸಲಾತಿ; ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ 10% ಮೀಸಲಾತಿಯನ್ನು ಜಾರಿಗೊಳಿಸುವುದು ಹೀಗೆ ಹಲವಾರು ಯೋಜನೆಗಳ ಉಲ್ಲೇಖ ಇದೆ.  ಬಡವರಿಗೆ, ನಗರ ಬಡವರಿಗೆ, ನಿರುದ್ಯೋಗಿಗಳಿಗೆ MGNREGA ಅಡಿಯಲ್ಲಿ ಉದ್ಯೋಗ ನಿರ್ಮಾಣದಲ್ಲಿ ಹೆಚ್ಚಳ, ನಗರ ಉದ್ಯೋಗ ಕಾರ್ಯಕ್ರಮ. 40 % ನಿರುದ್ಯೋಗದಿಂದ ತತ್ತರಿಸುತ್ತಿರುವ ದೇಶಕ್ಕೆ, ಯುವ ಜನಾಂಗಕ್ಕೆ ಇದು ನಿಜವಾಗಿಯೂ ಬೇಕಾದ ಯೋಜನೆ. 2,500 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆಯರ ನೇಮಕಾತಿ. ಅಂಗನವಾಡಿ ಕಾರ್ಯಕರ್ತೆಯರ ಸಂಖ್ಯೆ ದ್ವಿಗುಣಗೊಳಿಸಿ ಹೆಚ್ಚುವರಿಯಾಗಿ 14 ಲಕ್ಷ ಉದ್ಯೋಗಗಳ  ಸೃಷ್ಟಿ. ಹೀಗೆ ಈ ಪ್ರಣಾಳಿಕೆಯಲ್ಲಿ ತುಂಬಾ ಒತ್ತು ಕೊಟ್ಟಿರುವ ಅಂಶ ಉದ್ಯೋಗ ಸೃಷ್ಟಿ.

ಸಾಮಾಜಿಕ ನ್ಯಾಯ: ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿಯ ಮೇಲಿನ 50% ಮಿತಿಯನ್ನು ತೆಗೆದುಹಾಕಲು ಸಾಂವಿಧಾನಿಕ ತಿದ್ದುಪಡಿಗಳು ಹಾಗೆಯೇ ರಾಷ್ಟ್ರವ್ಯಾಪಿ ಜಾತಿ ಗಣತಿ. ಒಂದು ದೇಶದ ಕಾರ್ಮಿಕ ಮಾರುಕಟ್ಟೆಗಳು, ಸಂಪತ್ತಿನ ಅಸಮಾನತೆ ಮತ್ತು ನೀತಿ ಅನುಷ್ಠಾನವನ್ನು ಅರ್ಥಮಾಡಿಕೊಳ್ಳಲು ಜಾತಿ ಗಣತಿ ನಿರ್ಣಾಯಕವಾಗುತ್ತದೆ. Gig ಕೆಲಸಗಾರರು ಮತ್ತು ಅಸಂಘಟಿತ ಕಾರ್ಮಿಕ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ಕಾನೂನು, ಎಲ್ಲ ರಾಜ್ಯಗಳಲ್ಲೂ ಇಂದಿರಾ ಕ್ಯಾಂಟೀನ್‌ಗಳ ತೆರೆಯುವಿಕೆ ಪ್ರಸ್ತಾಪವಾಗಿದೆ. ಇದರಿಂದ ದೇಶದ ಪ್ರಜೆ ಹಸಿವೆಯಿಂದ ತತ್ತರಿಸಬೇಕಿಲ್ಲ. ತಳಮಟ್ಟದ ಜನರ ಉನ್ನತಿಗಾಗಿ ಇಂತಹ ಸಾಮಾಜಿಕ ಕಳಕಳಿ ಉಳ್ಳಂತಹ ಸಾಮಾಜಿಕ ಭದ್ರತೆ ಬೇಕೇ ಬೇಕು. 

MGNREGA

ಕನಿಷ್ಠ ಬೆಂಬಲ ಬೆಲೆ: ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ.

ಬಡ ಮತ್ತು ಸಾಮಾನ್ಯ ಜನರ ಏಳಿಗೆ: ಸಾರ್ವತ್ರಿಕ ಆರೋಗ್ಯ ರಕ್ಷಣೆಗಾಗಿ ₹25 ಲಕ್ಷದವರೆಗಿನ ನಗದು ರಹಿತ ವಿಮೆ; ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಅಡಿಯಲ್ಲಿ ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಕಲಚೇತನರಿಗೆ ₹ 1000 ಪಿಂಚಣಿ ಸೌಲಭ್ಯ. ಪ್ರತಿ ಬಡ ಭಾರತೀಯ ಕುಟುಂಬ (ಆದಾಯ ಪಿರಮಿಡ್‌ನ ಅತೀ ಕೆಳ ಸ್ತರದಲ್ಲಿರುವ ಬಡ ಕುಟುಂಬಕ್ಕೆ ಮಾತ್ರ) ಕ್ಕೆ ಬೇಷರತ್ ನಗದು ವರ್ಗಾವಣೆಯಾಗಿ ವರ್ಷಕ್ಕೆ 1 ಲಕ್ಷ ನೀಡಲು ಮಹಾಲಕ್ಷ್ಮಿ ಯೋಜನೆಯ ಪ್ರಾರಂಭ.

ಕನಿಷ್ಠ ವೇತನ ನಿಗದಿ: MGNREGA ಅಡಿಯಲ್ಲಿ ದಿನ ವೇತನ ರೂಪಾಯಿ 400ಕ್ಕೆ ಹೆಚ್ಚಳ. ರಾಷ್ಟ್ರೀಯ ಕನಿಷ್ಠ ವೇತನವನ್ನು ದಿನಕ್ಕೆ 400 ರೂಪಾಯಿಯಾಗಿ ನಿಗದಿ ಪಡಿಸುವುದು. ಭಾರತದಲ್ಲಿ ದಿನಕ್ಕೆ $ 5 ಕ್ಕಿಂತಲೂ ಕಡಿಮೆ ಹಣದಲ್ಲಿ ಜೀವನ ಸಾಗಿಸುತ್ತಿರುವವರ ಸಂಖ್ಯೆ 83 %, ಈ ಸೂಚ್ಯಂಕದಲ್ಲಿ ಭಾರತ ಬಾಂಗ್ಲಾದೇಶ, ಪಾಕಿಸ್ತಾನಗಿಂತಲೂ ಕೆಳಮಟ್ಟದಲ್ಲಿ ಇದೆ. 86 % (೨೦೨೨ ರ ಮಾಹಿತಿ ಪ್ರಕಾರ) ಜನರು ರೇಷನ್ ಮೇಲೆ ಅವಲಂಬಿತರಾಗಿರುವ ನಮ್ಮ ದೇಶದಲ್ಲಿ, ಕನಿಷ್ಠ ವೇತನವನ್ನು ನಿಗದಿ ಪಡಿಸುವುದು ಅತೀ ಅಗತ್ಯ. ಇದರಿಂದ ಜನರನ್ನು ಬಡತನದ ರೇಖೆಗಿಂತ ಮೇಲೆ ತರಲು ಸಾಧ್ಯ ಕೂಡ. ಇತ್ತೀಚಿಗೆ ಆಕ್ಸ್‌ಫಾಮ್ ಎಂಬ ಸಂಸ್ಥೆ ನೀಡಿರುವ ವರದಿ ಪ್ರಕಾರ, ಭಾರತದ 1% (ಅತೀ ಶ್ರೀಮಂತ ವರ್ಗ) ಜನರು ದೇಶದ 73% ಸಂಪತ್ತನ್ನು ಹೊಂದಿದ್ದಾರೆ. ಉಳಿದವರ (670 ಮಿಲಿಯನ್ ಜನರ) ಸಂಪತ್ತಿನಲ್ಲಿ ಆದ ಏರಿಕೆ ಬರಿಯ 1%. ಈ ಅಂಕಿ ಅಂಶಗಳು ನಮ್ಮಲ್ಲಿರುವ ಸಂಪತ್ತಿನ ಹಾಗೂ ಆದಾಯದ ಅಸಮಾನತೆಯನ್ನು ತೋರಿಸುತ್ತವೆ. ಈ ನಿಟ್ಟಿನಲ್ಲಿ ಕನಿಷ್ಠ ವೇತನ ನಿಗದಿ ನಿಜಕ್ಕೂ ನಮ್ಮ ದೇಶಕ್ಕೆ ಬೇಕಾಗಿರುವ ಪಾಲಿಸಿ.

ದೇಶದ ಆರ್ಥಿಕ ಬೆಳವಣಿಗೆ: ದೇಶದ ಪ್ರಗತಿಗಾಗಿ – ಕೆಲಸ, ಸಂಪತ್ತು ಮತ್ತು ಕಲ್ಯಾಣ ಉದ್ದೇಶಿತ – “ನವ ಸಂಕಲ್ಪ ಆರ್ಥಿಕ ನೀತಿ”ಯ ನಕಾಶೆಯನ್ನೂ ಪ್ರಣಾಳಿಕೆಯು ಮತದಾರರ ಮುಂದಿಟ್ಟಿದೆ. ತ್ವರಿತ ಬೆಳವಣಿಗೆ ಮತ್ತು ಸಂಪತ್ತಿನ ಉತ್ಪಾದನೆ ಬಗ್ಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರುವ ಈ ದಾಖಲೆಯಲ್ಲಿ ಮುಂದಿನ 10 ವರ್ಷಗಳಲ್ಲಿ ಭಾರತದ ಜಿಡಿಪಿಯನ್ನು ದ್ವಿಗುಣಗೊಳಿಸುವ ಯೋಜನೆಯೂ ಇದೆ. ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆಯ ಪಾಲನ್ನು 14 % ದಿಂದ 20 % ಗೆ ಹೆಚ್ಚಿಸುವ ಮೂಲಕ ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಸಂಕಲ್ಪವೂ ಈ ಪ್ರಣಾಳಿಕೆಯಲ್ಲಿ ಇದೆ. ಉದ್ಯೋಗ ಸೃಷ್ಟಿಯಲ್ಲಿ ಇದು ಮಹತ್ತರವಾದ ಸಂಕಲ್ಪ. ರೈಲ್ವೇ ಮೂಲಸೌಕರ್ಯದ ಆಧುನೀಕರಣ, ಹಸಿರು ಶಕ್ತಿಯ ಉತ್ತೇಜನ, ಕಾಡು ಸಂಪನ್ಮೂಲಗಳ ಸಂರಕ್ಷಣೆ, ಮೀನುಗಾರ ಸಮುದಾಯಗಳ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕರಾವಳಿ ವಲಯಗಳ ಸಂರಕ್ಷಣೆ – ಹವಾಮಾನ ವೈಪರೀತ್ಯವನ್ನು, ವಿಪರೀತ ವಾಯು ಮಾಲಿನ್ಯ ಕಾಣುತ್ತಿರುವ ದೇಶಕ್ಕೆ ಇದು ಇವತ್ತಿನ ಅಗತ್ಯ. ಸರಾಗ ವ್ಯಾಪಾರ ಮತ್ತು ವ್ಯವಹಾರವನ್ನು ಸುಗಮ ಗೊಳಿಸಲು GST ಕಾನೂನಿನಲ್ಲಿ ಬದಲಾವಣೆ – GST ೨.೦ ಜಾರಿ (ಸಾರ್ವತ್ರಿಕ/ಏಕ ರೀತಿಯ ದರ ನಿಗದಿ).

ಸಂವಿಧಾನ ಬದ್ಧತೆ:

ಈ ಪ್ರಣಾಳಿಕೆ ಸಾಂವಿಧಾನಿಕ ತತ್ವಗಳು, ಸಾಂವಿಧಾನಿಕ ಮೌಲ್ಯಗಳು, ಧ್ಯೇಯಗಳನ್ನು ಮತ್ತು ಸಾಂವಿಧಾನಿಕ ಆಶಯಗಳನ್ನು ಮತ್ತೆ ಮತ್ತೆ ಒತ್ತಿಹೇಳಿದೆ. ವಿವಿಧತೆಯಲ್ಲಿ ಏಕತೆ ಎನ್ನುವುದನ್ನು ಒತ್ತಿ ಹೇಳುತ್ತಾ, “ಸರಕಾರವು ಪ್ರಜೆಗಳ ವೈಯಕ್ತಿಕ ಆಯ್ಕೆಗಳಾದ ಆಹಾರ, ಉಡುಗೆ, ಒಲವು ಮತ್ತು ವಿವಾಹ” ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎನ್ನುವ ಭರವಸೆ ಕೂಡಾ ನೀಡುತ್ತಿದೆ. ಪ್ರತಿಯೋರ್ವರ ಮೂಲಭೂತ ಹಕ್ಕುಗಳನ್ನು, ಮಹಿಳಾ ಸುರಕ್ಷತೆ, ಸಂರಕ್ಷಣೆ, LGBTQIA ಸಮುದಾಯದ ಹಕ್ಕುಗಳನ್ನು ಸಂರಕ್ಷಿಸುತ್ತ, ಇಂಟರ್ನೆಟ್‌ನ ಸ್ವಾತಂತ್ರ್ಯವನ್ನು ಕೂಡಾ ಸಂರಕ್ಷಿಸುವ ಭರವಸೆ ಕೂಡ ಇಲ್ಲಿದೆ. ಬಹುಶಃ ಈ ಪ್ರಣಾಳಿಕೆಯ ಪ್ರಮುಖ ಧನಾತ್ಮಕ ಅಂಶವೆಂದರೆ ನಮ್ಮ ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳು ನಿಂತಿರುವ ಸಾಂವಿಧಾನಿಕ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದು. ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದು ವರದಿಗಳು ಬರುತ್ತಿರುವ ವೇಳೆಯಲ್ಲಿ, ಇಂತಹ ವಾಗ್ದಾನ ನಿಜಕ್ಕೂ ಶ್ಲಾಘನೀಯ.

ಒಕ್ಕೂಟ ವ್ಯವಸ್ಥೆಗೆ ಒತ್ತು:

ಹಾಗೆಯೇ ಈ ಪ್ರಣಾಳಿಕೆ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತಾ, ರಾಜ್ಯಗಳ ಸ್ವಾಯತ್ತತೆಯನ್ನು ಪೋಷಿಸುವ ಬದ್ಧತೆಯನ್ನೂ ಹೇಳುತ್ತದೆ. ಒಕ್ಕೂಟ ವ್ಯವಸ್ಥೆಗೆ, ರಾಜ್ಯಗಳಿಗೆ, ಜನರಿಗೆ, ಸಂಸ್ಥೆಗಳಿಗೆ ಸಂವಿಧಾನವು ನೀಡಿರುವ ಹಕ್ಕು, ಸ್ವಾಯತ್ತತೆಯನ್ನು ರಕ್ಷಿಸುವ ವಾಗ್ದಾನವೂ ಇದೆ. ಚುನಾವಣಾ ನಿಯಮಗಳ ಪರಿಷ್ಕರಣೆಯ ಬಗ್ಗೆಯೂ ಈ ಪ್ರಣಾಳಿಕೆ ಪ್ರಸ್ತಾಪಿಸುತ್ತದೆ.

ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ, ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಜನರ ನಂಬಿಕೆಯನ್ನು ಪುನಃ ಸ್ಥಾಪಿಸುತ್ತ, ಕೆಲಸ, ಸಂಪತ್ತು, ಉನ್ನತಿ – ಈ ಗುರಿ ಇಟ್ಟುಕೊಂಡು, ಭಾರತದ ಒಕ್ಕೂಟ ರಚನೆಯನ್ನು ಮತ್ತಷ್ಟು ಬಲಗೊಳಿಸುತ್ತ, ಜನರ ಸರ್ವೋತೋಮುಖ ಅಭಿವೃದ್ಧಿ, ಹಾಗೂ ದೇಶದ ಜಿಡಿಪಿಯನ್ನು ದ್ವಿಗುಣ ಗೊಳಿಸಿ, ಉತ್ಪಾದನೆಯನ್ನು ಉತ್ತೇಜಿಸಿ,  ನವ ಸಂಕಲ್ಪವನ್ನು ಹೊಂದಿರುವ ಆರ್ಥಿಕತೆಯ ಸುತ್ತ ಹೆಣೆದಿರುವ ಈ 5 ನ್ಯಾಯಗಳು,25 ಗ್ಯಾರಂಟಿಗಳು ಜಾರಿಗೆ ಬಂದರೆ ಭಾರತದ ಪ್ರಜೆಗಳ ಗೆಲುವದು.‌

ಸುಚಿತ್ರಾ

ವಕೀಲರು ಹಾಗೂ  ರಾಜಕೀಯ ವಿಶ್ಲೇಷಕರು

More articles

Latest article