ಸಮಾಜ ಸೇವಕಿ ಮಂಗಳಮುಖಿ ಬರ್ಬರ ಹತ್ಯೆ; ಆಸ್ತಿಗಾಗಿ ನೂರು ದಿನದ ಹಿಂದೆ ಮದುವೆಯಾಗಿದ್ದ ಪತಿಯೇ ಹತ್ಯೆ ಮಾಡಿದ ಶಂಕೆ

Most read

ಬೆಂಗಳೂರು: 40 ವರ್ಷದ ಮಂಗಳಮುಖಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್ನಲ್ಲಿ ನಡೆದಿದೆ. ತನುಶ್ರೀ ಹತ್ಯೆಗೀಡಾದ ದುರ್ದೈವಿ ಮಂಗಳಮುಖಿ. ಈಕೆಯನ್ನು ಆಕೆಯ ನಿವಾಸದಲ್ಲಿಯೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತನುಶ್ರೀ ಅವರು ಮೂರು ದಿನಗಳ ಹಿಂದೆಯೇ ಕೊಲೆಯಾಗಿದ್ದರೂ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತನುಶ್ರೀ ಅವರು, ಸಂಗಮ ಎಂಬ ಸಮಾಜ ಸೇವಾ ಸಂಘಟನೆಯನ್ನು ನಡೆಸುತ್ತಿದ್ದರು. ಜತೆಗೆ ಕನ್ನಡ ಪರ ಸಂಘಟನೆಗಳ ಜತೆಯೂ ಗುರುತಿಸಿಕೊಂಡಿದ್ದರು. ಇವರಿಗೆ ಜಗನ್ನಾಥ್‌ ಎಂಬಾತನ ಜತೆ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಈಕೆಯ ಬಳಿಯಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಲಪಟಾಯಿಸಲೆಂದೇ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಆಸ್ತಿ ಪಡೆಯುವ ಉದ್ಧೇಶದಿಂದಲೇ ಈಕೆಯನ್ನು ಜಗನ್ನಾಥ್‌ ಮದುವೆಯಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕೆ.ಆರ್.ಪುರಂ ಠಾಣೆ ಪೋಲಿಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳಮುಖಿಯರ ನಾಯಕಿಯೂ ಆಗಿದ್ದ ತನುಶ್ರೀ ಅವರ ಹತ್ಯೆಯ ಸುದ್ದಿ ತಿಳಿದು ನೂರಾರು ಮಂಗಳಮುಖಿಯರು ಸೇರಿ ರೋದಿಸುತ್ತಿದ್ದರು.
ಹತ್ಯೆ ಬಳಿಕ ಪತಿ ಜಗನ್ನಾಥ್‌ ಮತ್ತು ತನುಶ್ರೀ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸದಾಕೆ ಇಬ್ಬರೂ ಪರಾರಿಯಾಗಿದ್ದಾರೆ. ಒಟ್ಟಿಗೆ ಪರಾರಿಯಾಗಿರುವುದು ಹತ್ಯೆಗೆ ಕೆಲಸದಾಕೆಯೂ ಕೈ ಜೋಡಿಸಿರುವ ಅನುಮಾನ ಉಂಟಾಗಿದೆ. ಇವರಿಬ್ಬರೂ ಅಕ್ರಮ ಸಂಬಂಧ ಹೊಂದಿದ್ದರೇ ಎಂಬ ಕೋನದಿಂದಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.‌

More articles

Latest article