ಬೆಂಗಳೂರು: 77ನೇ ಗಣರಾಜ್ಯೋತ್ಸವ ದಿನಾಚರಣೆಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸಜ್ಜಾಗಿದೆ. ಜ.26, ಸೋಮವಾರ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಥ್ ಅವರು ಧ್ವಜಾರೋಹಣ ನೆರೆವೇರಿಸಲಿದ್ದಾರೆ. ಧ್ವಜಾರೋಹಣದ ನಂತರ ರಾಜ್ಯಪಾಲರು ಗೌರವವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸದಸ್ಯರು ಹಾಜರಿರಲಿದ್ದಾರೆ ಎಂದರು.
ಪಥಸಂಚಲನದಲ್ಲಿ ಸೇನೆ, ವಾಯುಪಡೆ, ಸಿಆರ್ಪಿಎಫ್ ಮಹಿಳಾ ಘಟಕ, ತಮಿಳುನಾಡು ರಾಜ್ಯ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ. ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಭಾಗವಹಿಸಲಿದ್ದಾರೆ. 1,400 ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ಆನ್ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾರ್ವಜನಿಕರು 8 ಗಂಟೆ ಒಳಗೆ ಮೈದಾನದಲ್ಲಿ ಹಾಜರಿರಬೇಕು. ಭದ್ರತೆಗಾಗಿ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ವಾಹನ ಸಂಚಾರ, ಪಾರ್ಕಿಂಗ್ ಬಂದ್:
ಅಂದು ಬೆಳಗ್ಗೆ 8:30ರಿಂದ 10:30ರವರೆಗೆ ಕಬ್ಬನ್ ರಸ್ತೆಯಲ್ಲಿ, ಬಿಆರ್ವಿ ಜಂಕ್ಷನ್ನಿಂದ ಕಾಮರಾಜ ರಸ್ತೆ ಜಂಕ್ಷನ್ವರೆಗೆ ಎರಡೂ ದಿಕ್ಕಿನಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ಸರ್ಕಲ್, ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರೋಡ್, ಸಿಟಿಓ ಸರ್ಕಲ್ನಿಂದ ಕೆಆರ್ ರಸ್ತೆ, ಕಬ್ಬನ್ ರಸ್ತೆ ಜಂಕ್ಷನ್ವರೆಗೆ, ಎಂಜಿ ರೋಡ್, ಅನಿಲ್ ಕುಂಬ್ಳೆ ಸರ್ಕಲ್ನಿಂದ ಕ್ವೀನ್ಸ್ ಸರ್ಕಲ್ವರೆಗೆ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

