ಬೆಂಗಳೂರು : ಬೇಸಿಗೆ ಹಿನ್ನೆಯಲ್ಲಿ ತಲೆದೋರುವ ಕುಡಿಯುವ ನೀರಿನ ಅಭಾವ ನೀಗಿಸಲು ಮುಂದಿನ ಮೂರು ತಿಂಗಳು ಜಿಲ್ಲಾ ಪಂಚಾಯಿತಿ ಸಿಇಒ ಪಿಡಿಒ ಜೊತೆ ಸಭೆ ನಡೆಸಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ರಾಜ್ಯದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಪ್ರತಿ 2ನೇ ಹಾಗೂಈ 4ನೇ ಸೋಮವಾರ ಪಿಡಿಒ ಜೊತೆ ಕುಡಿಯುವ ನೀರಿನ ಸಂಬಂಧ ಸಭೆ ನಡೆಸಬೇಕು ಎಂದು ರಾಜ್ಯದ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ಜಿಲ್ಲಾ ಪಂಚಾಯಿತಿಗಳಲ್ಲಿ 24/7 ನಿಯಂತ್ರಣ ಕೊಠಡಿಗಳನ್ನು ತೆರೆದು, ಸಿಬ್ಬಂದಿಗಳನ್ನು ನಿಯೋಜಿಸಲು ಹಾಗೂ ತಾಲ್ಲೂಕು ಮಟ್ಟದಲ್ಲಿ ಕಾರ್ಯಾನಿರ್ವಾಹಕ ಅಧಿಕಾರಿಗಳ ಮುಖಾಂತರ ಕ್ಷಿಪ ಕಾರ್ಯಪಡೆ ರಚಿಸಿ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ತಿಳಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ನೀರಿನ ಮೂಲಗಳನ್ನು ಶೇ.100ರಷ್ಟು ಭೌತಿಕ ಪರಿಶೀಲನೆ ನಡೆಸಿ, ಕೊಳವೆ ಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ಹಾಗೂ ಕಲುಷಿತ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಕೈಗೊಂಡು, ಕೊಳವೆಬಾವಿ ಸುತ್ತ ಕಾಂಕ್ರಿಟ್ ಕಟ್ಟೆಯನ್ನು ಕಟ್ಟಿ, ಕಲುಷಿತ ನೀರು ಕೊಳವೆಬಾವಿಗೆ ಸೇರದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಲಾಗಿದೆ ಎಂದರು.
ನೀರಿನ ಮೂಲಗಳ ಸುರಕ್ಷತೆಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಹಾಗೂ ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಗ್ರಾಮಸ್ಥರಿಗೆ ಅಗತ್ಯ ಜಾಗೃತಿ ಮೂಡಿಸಲು ಸಹ ಸೂಚನೆಗಳನ್ನು ನಿಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಾಲಿ ಇರುವ ಜಲಮೂಲಗಳು ಬತ್ತಿಹೋಗಿರುವುದರಿಂದ ಹಾಗೂ ಕೊಳವೆ ಬಾವಿಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ರಾಜ್ಯದ ಕೆಲವೊಂದು ಜಿಲ್ಲೆಗಳ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿರುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾದಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

