ಮಂಗಳೂರು: ಅಪ್ಪ ಬೀಡಿ ಸೇದಿ ಉಳಿದ ಭಾಗವನ್ನು ಬಿಸಾಡಿದ್ದಾನೆ. ಆ ಉಳಿದ ಭಾಗವನ್ನು 10 ತಿಂಗಳ ಮಗುವೊಂದು ನುಂಗಿ ಅಸು ನೀಗಿರುವ ದುರಂತ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರ್ ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶ್ ಕುಮಾರ್ ಮೃತ ಪಟ್ಟ ಮಗು.
ಬೀಡಿ ತುಂಡನ್ನು ನುಂಗಿದ ಮಗು ಅಸ್ವಸ್ಥಗೊಂಡಿತ್ತು. ಕೂಡಲೇ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಇದೀಗ ಪತ್ನಿಯೇ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ.
ಮನೆಯೊಳಗೆ ಬೀಡಿ ತುಂಡನ್ನು ಬಿಸಾಡದಂತೆ ಗಂಡನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೆ. ಆದರೂ ಅವರು ಬೀಡಿ ತುಂಡನ್ನು ಮನೆಯೊಳಗೆ ಎಸೆಯುತ್ತಿದ್ದರು ಎಂದು ಮಗುವಿನ ತಾಯಿ ಲಕ್ಷ್ಮಿ ದೇವಿ ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.