ಕೃಷ್ಣಾನಗರ: ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ 400+ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿರುವ ಭಾರತೀಯ ಜನತಾ ಪಕ್ಷ 200 ಸ್ಥಾನ ಗೆದ್ದು ತೋರಿಸಲಿ ಸಾಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲೊಡ್ಡಿದ್ದಾರೆ.
ಬಿಜೆಪಿ 400 ದಾಟುತ್ತೇವೆ ಎನ್ನುತ್ತಿದ್ದಾರೆ. ಮೊದಲು ಅವರು ಇನ್ನೂರನ್ನು ದಾಟಲಿ. 2021ರ ವಿಧಾನಸಭೆ ಚುನಾವಣೆಯಲ್ಲಿ ಅವರು 200ಕ್ಕೂ ಹೆಚ್ಚು ಸ್ತಾನ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದರು, ಗೆದ್ದಿದ್ದು ಕೇವಲ 77 ಕ್ಷೇತ್ರಗಳನ್ನು ಮಾತ್ರ. ಗೆದ್ದ 77 ಶಾಸಕರಲ್ಲಿ ಹಲವರು ಈಗ ನಮ್ಮೊಂದಿಗಿದ್ದಾರೆ ಎಂದು ಮಮತಾ ಅಣಕವಾಡಿದರು.
ಕೃಷ್ಣಾನಗರದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಹುವಾ ಮೊಯಿತ್ರಾ ಅವರ ಪರವಾಗಿ ಪ್ರಚಾರ ನಡೆಸಿದ ಮಮತಾ ಬ್ಯಾನರ್ಜಿ, ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲ ಎಂದು ಮತ್ತೊಮ್ಮೆ ಘೋಷಿಸಿದರು.
ಬಿಜೆಪಿ ಒಂದು ʻಜುಮ್ಲಾʼ ಪಕ್ಷ ಎಂದು ಬಣ್ಣಿಸಿದ ಅವರು ಬಿಜೆಪಿಯವರು ಸುಳ್ಳುಕೋರರು. ವಿದೇಶೀ ವಲಸೆಕೋರರಿಗೆ ಪೌರತ್ವ ನೀಡುವ ಹುನ್ನಾರ ಸಿಎಎ ಮೂಲಕ ನಡೆಸಲು ಹೊರಡಲಾಗಿದೆ. ಸಿಎಎ ಬೆನ್ನಲ್ಲೇ ಅವರು ಎನ್ ಆರ್ ಸಿಯನ್ನು ತರುತ್ತಾರೆ. ನಾವು ಸಿಎಎ ಆಗಲೀ ಎನ್ ಆರ್ ಸಿಯನ್ನಾಗಲೀ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದರು.
ಮಥುವಾ ಸಮುದಾಯಕ್ಕೆ ಭರವಸೆ ನೀಡಿದ ಮಮತಾ ಬ್ಯಾನರ್ಜಿ ನಿಮ್ಮ ಪೌರತ್ವವನ್ನು ಕಿತ್ತುಕೊಳ್ಳಲು ನಾನು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಮಥುವಾ ಸಮುದಾಯ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದಿರುವ ಹಿಂದೂ ಧರ್ಮದ ದುರ್ಬಲ ವರ್ಗಕ್ಕೆ ಸೇರಿದೆ.
ಬಿಜೆಪಿ ವಿರುದ್ಧದ ಸಂಘರ್ಷಕ್ಕಾಗಿ ಅಭ್ಯರ್ಥಿ ಮಹುವಾ ಮೋಯಿತ್ರಾ ಅವರನ್ನು ಶ್ಲಾಘಿಸಿದ ಅವರು, ನೀವು ಮಹುವಾ ಅವರನ್ನು ಗೆಲ್ಲಿಸಿ ಕಳುಹಿಸಿದರೂ ಅವರನ್ನು ಲೋಕಸಭೆಯಿಂದ ಅನ್ಯಾಯವಾಗಿ ಉಚ್ಚಾಟಿಸಲಾಯಿತು. ಬಿಜೆಪಿ ವಿರುದ್ಧ ಯಾವ ಹಿಂಜರಿಕೆ ಇಲ್ಲದೆ ವಾಗ್ದಾಳಿ ನಡೆಸಿದ್ದಕ್ಕಾಗಿ ಹೀಗೆ ಮಾಡಲಾಯಿತು. ಈಗ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ನಮ್ಮದು ಎಂದು ಮಮತ ಹೇಳಿದರು.