ಉಡುಪಿ: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಮೂರು ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮೀನು ಕದ್ದಿರುವುದಾಗಿ ಆರೋಪಿಸಿ ಲಕ್ಷ್ಮೀ ಬಾಯಿ ಎಂಬುವರನ್ನು ಮತ್ತೊಬ್ಬ ಮಹಿಳೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಕಪಾಳಕ್ಕೆ ಹೊಡೆದಿರುವುದು ಹಾಗೂ ಬಳಿಕ ಮರಕ್ಕೆ ಕಟ್ಟಿಹಾಕಿ ಹೊಡೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಈ ಕುರಿತು ಮಲ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ಸೇರಿದ್ದರೂ ಯಾರೊಬ್ಬರೂ ಆ ಮಹಿಳೆಯ ರಕ್ಷಣೆಗೆ ಮುಂದಾಗಿಲ್ಲ. ಪೊಲೀಸರು ಸುಂದರ್, ಶಿಲ್ಪ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ವಿಜಯನಗರ ಜಿಲ್ಲೆಯಿಂದ ಬಂದಿರುವ ಮಹಿಳೆಯ ಮೇಲೆ ಸ್ಥಳೀಯ ಮಹಿಳೆಯರು ಹಲ್ಲೆ ನಡೆಸಿದ್ದಾರೆ. ಮೀನು ಕದ್ದ ಆರೋಪದ ಮೇಲೆ ಲಕ್ಷ್ಮೀ ಬಾಯಿ ಎಂಬುವವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ವಿಡಿಯೋ ಪರಿಶೀಲಿಸಿ ಎಲ್ಲ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತೀವ್ರವಾಗಿ ಖಂಡಿಸಿದ್ದು, ಕ್ಷುಲ್ಲಕ ತಪ್ಪು ಮಾಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿರುವುದು ತಪ್ಪು. ಹಲ್ಲೆ ನಡೆಸುವವರು ಒಂದು ಕಡೆಯಾದರೆ, ಉಳಿದವರು ನಗುತ್ತ ನಿಂತಿದ್ದಾರೆ. ಯಾರೊಬ್ಬರೂ ಹಲ್ಲೆ ತಡೆಯುವ ಪ್ರಯತ್ನ ಮಾಡಲಿಲ್ಲ. ಜನರ ಮನಸ್ಥಿತಿ ಈ ರೀತಿಯಾದರೆ ಕಷ್ಟ ಎಂದಿದ್ದಾರೆ.
ಯಾರೋ ಒಬ್ಬರಿಗೆ ಹಿಂಸೆಯಾಗುವಾಗ ನಾವು ನಗುವುದು ತಪ್ಪು. ನಾವು ಎತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಕಾಡುತ್ತದೆ. ಈಗಾಗಲೇ ಉಡುಪಿ ಎಸ್ಪಿ ಯವರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಮತ್ತೊಮ್ಮೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ.