ಬೆಂಗಳೂರು : ನಗರದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭವಾಗುವುದಕ್ಕೂ ಮುನ್ನ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿಯಡಿ 175 ಕೋಟಿ ರೂ. ಹಾಗೂ ವರ್ಲ್ಡ್ ಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ ಅಡಿಯಲ್ಲಿ 2000 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂದು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸುವ ಮಳೆನೀರು ಕಾಲುವೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ವೇಗ ಹೆಚ್ಚಿಸಿ, ಮೇ ತಿಂಗಳಲ್ಲಿ ಆರಂಭವಾಗುವ ಪೂರ್ವ ಮಾನ್ಸೂನ್ ಮಳೆಗಾಲಕ್ಕೂ ಮುನ್ನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ಪ್ರಕೃತಿ ಆಧಾರಿತ ಪರಿಹಾರಗಳಿಗೆ ಆದ್ಯತೆ: ನಗರದಲ್ಲಿರುವ ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ಪ್ರಕೃತಿ ಆಧಾರಿತ ಪರಿಹಾರಗಳ ಮೂಲಕ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಜಕ್ಕೂರು ಕೆರೆಯಲ್ಲಿ ಈಗಾಗಲೇ ಪ್ರಕೃತಿ ಆಧಾರಿತ ಮಾದರಿಯಲ್ಲಿ ವೆಟ್ಲ್ಯಾಂಡ್ ಅಭಿವೃದ್ಧಿಪಡಿಸಲಾಗಿದೆ. ಇತರೆ ಕೆರೆಗಳಲ್ಲಿಯೂ ಇದೇ ಮಾದರಿಯನ್ನು ಅಳವಡಿಸಿಕೊಂಡು, ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವಂತೆ ಹಾಗೂ ಶುದ್ಧ ನೀರು ಹರಿಯುವಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಸದಾಗಿ ಕೈಗೆತ್ತಿಕೊಳ್ಳಲಾಗುತ್ತಿರುವ ಮಳೆನೀರು ಕಾಲುವೆಗಳಲ್ಲಿಯೂ ಪ್ರಕೃತಿ ಆಧಾರಿತ ಪರಿಹಾರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನೀರನ್ನು ಹಿಂಗಿಸುವ ಹಾಗೂ ಕೊಳಚೆ ನೀರನ್ನು ಹೀರಿಕೊಂಡು ಶುದ್ಧೀಕರಿಸುವ ಗುಣ ಹೊಂದಿರುವ Colocasia ಮತ್ತು Canna indica ಸಸಿಗಳನ್ನು ನೆಡಲು ನಿರ್ದೇಶನ ನೀಡಿದರು.
ಕೋಗಿಲು ಕೆರೆಗೆ ಸ್ಲೂಯಿಸ್ ಗೇಟ್ ಅಳವಡಿಸಿ:
ಶ್ರೀನಿವಾಸಪುರ ಕೆರೆಯಿಂದ ಕೋಗಿಲು ಕೆರೆಯವರೆಗೆ 1.1 ಕಿ.ಮೀ ಉದ್ದದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ಸಂದರ್ಭದಲ್ಲಿ, ಕೆರೆಯ ವೆಟ್ಲ್ಯಾಂಡ್ ವೀಕ್ಷಿಸಿ ಅದನ್ನು ಅಭಿವೃದ್ಧಿಪಡಿಸಿ ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲು ಸೂಚಿಸಿದರು. ಜೊತೆಗೆ ಮಳೆಗಾಲಕ್ಕೂ ಮುನ್ನ ಕೋಗಿಲು ಕೆರೆಗೆ ಸ್ಲೂಯಿಸ್ ಗೇಟ್ ಅಳವಡಿಸಲು ನಿರ್ದೇಶನ ನೀಡಿದರು.
ಶ್ರೀನಿವಾಸಪುರ ಕೆರೆ ಪುನರುಜ್ಜೀವನ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಮಳೆಗಾಲಕ್ಕೂ ಮುನ್ನ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ಹೊಸದಾಗಿ ಕಾಲುವೆ ನಿರ್ಮಾಣ: ಬೆಳ್ಳಳ್ಳಿ ಕೆರೆಯಿಂದ ಕಣ್ಣೂರು ಕೆರೆಯವರೆಗೆ ಭೂಮಾಪನದ ಮೂಲಕ ಸಮೀಕ್ಷೆ ನಡೆಸಿ ಗುರುತು ಹಾಕಿ, 660 ಮೀ. ಉದ್ದದ ಹೊಸ ರಾಜಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿರುವ ಜಲಾವೃತ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಆಕರ್ಷಣೀಯ ಸ್ಥಳಕ್ಕಾಗಿ ವಿನ್ಯಾಸ ರೂಪಿಸಿ : ದಾಸರಹಳ್ಳಿ ಮುಖ್ಯ ರಸ್ತೆ ರಾಜಕಾಲುವೆ ಬದಿಯಲ್ಲಿರುವ ಹೆಚ್ಚುವರಿ ಬಫರ್ ವಲಯವನ್ನು ಪಾದಚಾರಿಗಳಿಗೆ ಅನುಕೂಲವಾಗುವಂತೆ ಸೌಂದರ್ಯೀಕರಣಗೊಳಿಸಲು ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ವಿನ್ಯಾಸ ಸಿದ್ಧಪಡಿಸಿ, ಅತ್ಯುನ್ನತ ಮಾದರಿಯಲ್ಲಿ ಆಕರ್ಷಣೀಯ ಸ್ಥಳವನ್ನಾಗಿ ರೂಪಿಸಲು ಸೂಚಿಸಿದರು.
* ಕಣ್ಣೂರು ಗ್ರಾಮದಿಂದ ಕೆರೆಯವರೆಗೆ 470 ಮೀ. ಉದ್ದದ ಎರಡೂ ಬದಿಯ ಆರ್.ಸಿ.ಸಿ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದ್ದು, ವೇಗ ಹೆಚ್ಚಿಸಿ ಶೀಘ್ರ ಪೂರ್ಣಗೊಳಿಸಲು ಸೂಚನೆ ನೀಡಿದರು.
* ಚೊಕ್ಕನಹಳ್ಳಿ ಕೆರೆಯಿಂದ ಅಗ್ರಹಾರ ಕೆರೆಯವರೆಗೆ 670 ಮೀ. ಉದ್ದದ ಹೊಸ ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಾತ್ಕಾಲಿಕವಾಗಿ ನೀರಿನ ದಿಕ್ಕು ತಿರುಗಿಸಿ ಕಾಮಗಾರಿ ನಡೆಸಲಾಗುತ್ತಿದೆ.
* ರಾಚೇನಹಳ್ಳಿ ಮುಖ್ಯ ರಸ್ತೆಯಲ್ಲಿ 600 ಮೀ. ಉದ್ದದ ರಾಜಕಾಲುವೆ ಕಾಮಗಾರಿ ವೇಗವಾಗಿ ಪ್ರಗತಿಯಲ್ಲಿದೆ.
* ನಗರದಲ್ಲಿನ ಕುಂಟೆಗಳ ಸಮೀಕ್ಷೆ ನಡೆಸಿ ಮ್ಯಾಪಿಂಗ್ ಮಾಡಿ, ಪುನರುಜ್ಜೀವನಕ್ಕಾಗಿ ಪಟ್ಟಿ ಸಿದ್ಧಪಡಿಸಲು ಸೂಚನೆ ನೀಡಿದರು.
* ಸ್ಲೂಯಿಸ್ ಗೇಟ್ ಅಳವಡಿಸಬೇಕಿರುವ ಕೆರೆಗಳಿಗೆ ವಿನ್ಯಾಸ ರೂಪಿಸಿ, ಗೇಟ್ಗಳನ್ನು ಅಳವಡಿಸಲು ಸೂಚನೆ ನೀಡಿದರು.
* ನಾಗವಾರ ಜಂಕ್ಷನ್ನಲ್ಲಿ ಜಲಾವೃತ ಸಮಸ್ಯೆ ತಡೆಯಲು ರಸ್ತೆ ಸಹಿತ ಕಾಲುವೆ ನಿರ್ಮಿಸಲು ಸೂಚನೆ ನೀಡಿದರು.

