ಮಹಾರಾಷ್ಟ್ರದಲ್ಲಿ 2 ತಿಂಗಳಿನಲ್ಲಿ 479 ರೈತರ ಆತ್ಮಹತ್ಯೆ !: ಸರ್ಕಾರ ಮಾಹಿತಿ

Most read

ಮುಂಬೈ: ಪ್ರಸಕ್ತ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟು 479 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಪರಿಹಾರ ಮತ್ತು ಪುನರ್ವಸತಿ ಸಚಿವ ಮಕರಂದ್ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಲಿಖಿತ ಉತ್ತರ ನೀಡಿರುವ ಅವರು, ಮಾರ್ಚ್‌ನಲ್ಲಿ ಮರಾಠವಾಡ ಮತ್ತು ವಿದರ್ಭದಲ್ಲಿ 250 ರೈತರ ಆತ್ಮಹತ್ಯೆಗಳು ವರದಿಯಾಗಿವೆ. ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ 229 ಆತ್ಮಹತ್ಯೆಗಳು ವರದಿಯಾಗಿವೆ ಎಂದು ಉತ್ತರಿಸಿದ್ದಾರೆ.

ಮಾರ್ಚ್‌ನಲ್ಲಿ ನಡೆದ 250 ಪ್ರಕರಣಗಳಲ್ಲಿ 102 ಸರ್ಕಾರಿ ನಿಯಮಗಳ ಪ್ರಕಾರ ಆರ್ಥಿಕ ನೆರವಿಗೆ ಅರ್ಹವಾಗಿವೆ ಎಂದು ಕಂಡುಬಂದಿದ್ದು, 77 ಪ್ರಕರಣಗಳಲ್ಲಿ ಪರಿಹಾರ ಮೊತ್ತವನ್ನು ವಿತರಿಸಲಾಗಿದೆ. 62 ಮಂದಿ ಅನರ್ಹರು ಎಂದು ಕಂಡುಬಂದಿದ್ದು, 86 ಪ್ರಕರಣಗಳಲ್ಲಿ ವಿಚಾರಣೆ ಬಾಕಿ ಇದೆ ಎಂದು ಪಾಟೀಲ್ ಸದನಕ್ಕೆ ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ 229 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 74 ಮಂದಿ ಪರಿಹಾರಕ್ಕೆ ಅರ್ಹರು ಎಂದು ಕಂಡುಬಂದಿದೆ. ಈ 74 ಪ್ರಕರಣಗಳಲ್ಲಿ 33 ಪ್ರಕರಣಗಳ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.

2006 ಜನವರಿ 24ರ ಸರ್ಕಾರಿ ನಿರ್ಣಯದ ಪ್ರಕಾರ, ಬೆಳೆ ವೈಫಲ್ಯ, ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಿಂದ ಅಥವಾ ಪರವಾನಗಿ ಪಡೆದ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರುಪಾವತಿಸಲು ಅಸಮರ್ಥತೆ, ಹೆಚ್ಚುತ್ತಿರುವ ಸಾಲ ಇತ್ಯಾದಿಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರನ್ನು ಆರ್ಥಿಕ ಸಹಾಯಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತದೆ. ಅಂತಹ ರೈತರ ಸಂಬಂಧಿಕರಿಗೆ ರೂ.1 ಲಕ್ಷ ನೀಡಲಾಗುತ್ತದೆ. ಹಣಕಾಸಿನ ನೆರವಿನ ಹೆಚ್ಚಳ ಕುರಿತು ಯಾವುದೇ ಚಿಂತನೆ ಇಲ್ಲ ಎಂದೂ ಅವರು ತಿಳಿಸಿದ್ದಾರೆ.

More articles

Latest article