ಥಾಣೆ: ಮುಟ್ಟಾಗಿದ್ದಾರೆಯೇ ಇಲ್ಲವೇ ಎಂದು ಪರೀಕ್ಷಿಸಲು ವಿದ್ಯಾರ್ಥಿನಿಯರನ್ನು ಬೆತ್ತಲೆಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆಯ ಪ್ರಿನ್ಸಿಪಾಲ್ ಮತ್ತು ಸಹಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಮಹಾರಾಷ್ಟ್ರದ ಥಾಣೆ ಗ್ರಾಮೀಣ ಪೊಲೀಸ್ ಥಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಇವರ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಶೌಚಾಲಯದಲ್ಲಿ ರಕ್ತದ ಕಲೆಗಳು ಕಂಡು ಬಂದ ನಂತರ ಪ್ರಿನ್ಸಿಪಾಲ್ 10 ವಿದ್ಯಾರ್ಥಿನಿಯರನ್ನು ಬೆತ್ತಲೆಗೊಳಿಸಿ ಪರೀಕ್ಷಿಸಿದ್ದಾರೆ.
ಇಬ್ಬರನ್ನೂ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಶಾಲಾ ಆಡಳಿತ ಮಂಡಳಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಪೋಕ್ಸೋ ಕಾಯಿದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಶೌಚಾಲಯದಲ್ಲಿ ರಕ್ತದ ಕಲೆಗಳು ಬಂದಿವೆ. ಈ ಕಲೆಗಳಿಗೆ ಕಾರಣರಾದ ಬಾಲಕಿಯರು ಯಾರು ಎನ್ನುವುದನ್ನು ಪತ್ತೆ ಹಚ್ಚಲು 5 ರಿಂದ 10 ನೇ ತರಗತಿವರೆಗಿನ ಮಕ್ಕಳನ್ನು ಸಭಾಂಗಣದಲ್ಲಿ ಸೇರಿಸಿದ್ದಾರೆ. ಪ್ರೊಜೆಕ್ಟರ್ ನಲ್ಲಿ ರಕ್ತದ ಕಲೆಗಳ ಫೋಟೋಗಳನ್ನು ತೋರಿಸಿದ್ದಾರೆ. ಯಾರೆಲ್ಲಾ ಮುಟ್ಟಾಗಿದ್ದಾರೆ ಎಂಬ ಮಾಹಿತಿಯನ್ನು ಪ್ರಿನ್ಸಿಪಾಲ್ ಪಡೆದುಕೊಂಡಿದ್ದಾರೆ. ಕೈ ಎತ್ತಿದ ಬಾಲಕಿಯರ ಹೆಬ್ಬೆಟ್ಟಿನ ಗುರುತು ಪಡೆದುಕೊಂಡಿದ್ದಾರೆ. ಕೈ ಎತ್ತದ ಬಾಲಕಿಯರನ್ನು ಶೌಚಾಲಯಕೆ ಕರೆದೊಯ್ದು ಬೆತ್ತಲೆಗೊಳಿಸಿ ಪರೀಕ್ಷಿಸಿದ್ದಾರೆ.
ಸ್ಯಾನಿಟರಿ ಪ್ಯಾಡ್ ಅನ್ನು ಏಕೆ ಬಳಸುತ್ತಿಲ್ಲ ಎಂದು ಬಾಲಕಿಯೊಬ್ಬರ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿಯರು ತಮಗಾದ ಕೆಟ್ಟ ಅನುಭವವನ್ನು ಪೋಷಕರಿಗೆ ತಿಳಿಸಿದ್ದಾರೆ. ನಿನ್ನೆ ಅನೇಕ ಪೋಷಕರು ಶಾಲೆಯ ಎದುರು ಪ್ರತಿಭಟನೆ ನಡೆಸಿ ಶೋಷಣೆ ನಡೆಸಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಪಡಿಸಿದ್ದಾರೆ. ಪ್ರಿನ್ಸಿಪಾಲ್, ನಾಲ್ವರು ಶಿಕ್ಷಕರು ಸಹಾಯಕಿ ಮತ್ತು ಇಬ್ಬರು ಟ್ರಸ್ಟಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.