ಮುಂಬೈ: 2008ರಲ್ಲಿ ಮಹಾರಾಷ್ಟ್ರ ಮಾಲೆಗಾಂವ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷಗಳ ನಂತರ ರಾಷ್ಟ್ರೀಯ ತನಿಖಾ ದಳ ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನಿವೃತ್ತ ಸೇನಾಧಿಕಾರಿ ಲೆ.ಕ. ಶ್ರೀಕಾಂತ್ ಪುರೋಹಿತ್ ಸೇರಿದಂತೆ ಎಲ್ಲ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
ಆರೋಪಿಗಳನ್ನು ಯುಎಪಿಎ, ಶಸ್ತ್ರಾಸ್ತ್ರ ಕಾಯಿದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಎಲ್ಲ ಸೆಕ್ಷನ್ ಗಳ ಆರೋಪಗಳಿಂದ ಮುಕ್ತಗೊಳಿಸಿದೆ. ಈ ಪ್ರಕರಣಕ್ಕೂ ಈ ಆರೋಫಿಗಳಿಗೂ ಸಂಬಂಧ ಇದೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ವಿಶೇಷವಾಗಿ ಸ್ಫೋಟಕ್ಕೆ ಬಳಸಲಾದ ಬೈಕ್ ಪ್ರಜ್ನಾ ಸಿಂಗ್ ಠಾಕೂರ್ ಅವರಿಗೆ ಸೇರಿದ್ದು ಎನ್ನುವುದನ್ನು ಮತ್ತು ಸ್ಫೋಟಕಗಳನ್ನು ಕ.ಪುರೋಹಿತ್ ಅವರ ನಿವಾಸಲ್ಲಿ ಇರಿಸಲಾಗಿತ್ತು ಎನ್ನುವುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ.
ಏನಿದು ಪ್ರಕರಣ?
ಸೆಪ್ಟೆಂಬರ್ 29,2008 ರಂದು ರಂಜಾನ್ ಮಾಸ ಹಾಗೂ ನವರಾತ್ರಿ ದಿನಕ್ಕೂ ಮುನ್ನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್ ನ ಭಿಕ್ಕು ಚೌಕ್ ಎಂಬಲ್ಲಿ ಮುಸ್ಲಿಮರು ಮಸೀದಿಯಲ್ಲಿ ನಮಾಜ್ ಮುಗಿಸಿ ಹೊರಬಂದಾಗ ಬಾಂಬ್ ಸ್ಪೋಟಿಸಿ ಏಳು ಮಂದಿ ಮೃತ ಪಟ್ಟು, ಎಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಪ್ರದೇಶ ಮುಸ್ಲಿಂ ಪ್ರಾಬಲ್ಯ ಹೊಂದಿತ್ತು.
ಈ ಪ್ರಕರಣವನ್ನು ಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ನೇತೃತ್ವದ ಕಾಂಗ್ರೆಸ್ ಸರಕಾರ ಎಟಿಎಸ್ (ಉಗ್ರ ನಿಗ್ರಹ ದಳ) ಗೆ ವಹಿಸಿತ್ತು. ಹೇಮಂತ್ ಕರ್ಕರೆ ತನಿಖಾ ತಂಡದ ನೇತೃತ್ವ ವಹಿಸಿಕೊಂಡಿದ್ದರು. ಅಕ್ಟೋಬರ್ 2008ರಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಬಂಧಿಸಲಾಗಿತ್ತು. ನಂತರ ಕರ್ನಲ್ ಪುರೋಹಿತ್, ಸ್ವಾಮಿ ಆಸೀಮಾನಂದ ಮೇಜರ್ ರಮೇಶ್ ಉಪಾಧ್ಯಾಯ್, ಅಜಯ್ ರಾಹಿಕರ್, ಸಮೀರ್ ಕುಲಕರ್ಣಿ, ಸುಧಾಕರ್ ಚತುರ್ವೇದಿ, ಸುಧಾಕರ್ ಧಾರ್ ದ್ವಿವೇದಿ, ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಮೂರು ವರ್ಷಗಳ ನಂತರ 2011 ರಲ್ಲಿ ಪ್ರಕರಣವನ್ನು ಎನ್ ಐ ಎಗೆ ವಹಿಸಲಾಗಿತ್ತು. ಜೊತೆಗೆ ಮೋಕಾ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು.