ಮುಂಬೈ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ಸರ್ಕಾರದ ಮೈಸೂರ್ ಪೇಯಿಂಟ್ಸ್ ಅಂಡ್ ವರ್ನಿಷ್ ಲಿಮಿಟೆಡ್ ಉತ್ಪಾದಿಸುವ ಸಾಂಪ್ರದಾಯಿಕ ಇಂಕ್ ಅನ್ನು ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ. ನಿನ್ನೆ ಮತದಾನ ನಡೆದ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ 29 ನಗರ ಪಾಲಿಕೆಗಳಲ್ಲಿ ಮತದಾರರ ಬೆರಳಿಗೆ ಹಚ್ಚಿರುವ ಶಾಯಿ ಅಳಿಸಿಹೋಗಿರುವ ಆರೋಪ ಕೇಳಿ ಬಂದಿತ್ತು.
ಕೊರೆಸ್ ಇಂಡಿಯಾ ಲಿಮಿಟೆಡ್ ತಯಾರಿಸುವ ಅಳಿಸಲಾಗದ ಶಾಯಿ ಇರುವ ಮಾರ್ಕರ್ ಪೆನ್ನುಗಳಿಂದ ಮತದಾರರ ಬೆರಳಿಗೆ ಮಾರ್ಕ್ ಮಾಡಲಾಗುತ್ತಿತ್ತು. ಮಾರ್ಕರ್ ಪೆನ್ ಬಳಕೆಗೆ ವಿರೋಧ ಕೇಳಿ ಬಂದ ಬೆನ್ನಲ್ಲೇ ಚುನಾವಣಾ ಆಯೋಗ ಎಚ್ಚೆತ್ತುಕೊಂಡಿದೆ.
ಮಹಾರಾಷ್ಟ್ರದ 12 ಜಿಲ್ಲಾ ಪಂಚಾಯಿತಿಗಳು ಹಾಗೂ 125 ಪಂಚಾಯಿತಿ ಸಮಿತಿಗಳಿಗೆ ಮುಂದಿನ ತಿಂಗಳು 5ರಂದು ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಗಳಲ್ಲಿ ಸಾಂಪ್ರದಾಯಿಕ ಶಾಯಿ ಹಚ್ಚಲು ನಿರ್ಧರಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ತಿಳಿಸಿದ್ದಾರೆ.
ಚುನಾವಣಾ ಆಯೋಗವು ಇನ್ನು ಮುಂದೆ ಮಾರ್ಕರ್ ಪೆನ್ ಬಳಸುವುದಿಲ್ಲ. ಕರ್ನಾಟಕ ಸರ್ಕಾರದ ಮೈಸೂರ್ ಪೇಯಿಂಟ್ಸ್ ಅಂಡ್ ವರ್ನಿಷ್ ಲಿಮಿಟೆಡ್ ಉತ್ಪಾದಿಸುವ ಸಾಂಪ್ರದಾಯಿಕ ಶಾಯಿಯನ್ನು ಮುಂಬರುವ ಚುನಾವಣೆಗಳಲ್ಲಿ ಬಳಸಲಾಗುವುದು. ಆ ಶಾಯಿಯನ್ನೇ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗೂ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

