ಮಹಾಕುಂಭ ದುರಂತ; ಸಿಎಂ ಯೋಗಿ ಆದಿತ್ಯ ರಾಜೀನಾಮೆಗೆ ಆಗ್ರಹಿಸಿದ ಅಖಿಲೇಶ್‌ ಯಾದವ್‌

Most read

ಲಕ್ನೊ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಪಾದಿಸಿದ್ದಾರೆ. ಮಹಾಕುಂಭದಲ್ಲಿ ವಿಶ್ವದರ್ಜೆಯ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿಕೊಂಡವರು, ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಎಕ್ಸ್‌  ಮೂಲಕ ಆಗ್ರಹಿಸಿದ್ದಾರೆ.

ಮಹಾಕುಂಭ ಕುರಿತು ಜನರು ಹಾಗೂ ಸಾಧುಗಳಲ್ಲಿ ನಂಬಿಕೆ ಮತ್ತೆ ಬರುವಂತೆ ಮಾಡಲು, ಕುಂಭದ ಆಡಳಿತ ಮತ್ತು ನಿರ್ವಹಣೆಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಬದಲು ಕೂಡಲೇ ಸೇನೆಗೆ ನೀಡಬೇಕು ಎಂದು ಅವರು ಬರೆದುಕೊಂಡಿದ್ದಾರೆ. ವಿಶ್ವ ದರ್ಜೆಯ ಸವಲತ್ತುಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡದ್ದರ ಸತ್ಯ ಇದೀಗ ಎಲ್ಲರ ಮುಂದೆ ಬಯಲಾಗಿದೆ.ಈ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವವರು ಘಟನೆಯಲ್ಲಿ ಸತ್ತವರ ಪರವಾಗಿ ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಹಾಕುಂಭದಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ನಡೆದ ಸಾವುನೋವಿನ ವಿಷಯ ನೋವನ್ನುಂಟು ಮಾಡಿದೆ. ಹೆಚ್ಚಿನ ಅನಾಹುತ ತಡೆಯಲು ಹಾಗೂ ಗಾಯಗೊಂಡವರಿಗೆ ಸಹಾಯ ಮಾಡಲು ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಬೇಕು. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ತ್ವರಿತ ವ್ಯವಸ್ಥೆಗಳನ್ನು ಮಾಡಬೇಕು. ಸ್ಥಳದಲ್ಲಿ ಹೆಚ್ಚಿನ ಕಣ್ಗಾವಲು ಇರಿಸಬೇಕು. ಸುವ್ಯವಸ್ಥೆ ಹಾಗೂ ಭದ್ರತೆ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇಂತಹ ಸಂಕಷ್ಟದ ಸಮಯದಲ್ಲಿ ಭಕ್ತರು ಸಮಾಧಾನಚಿತ್ತರಾಗಿರಬೇಕು ಎಂದು ಇದೇ ವೇಳೆ ಅವರು ಕರೆ ನೀಡಿದ್ದಾರೆ. ಈಗ ನಡೆದ ತಪ್ಪಿನಿಂದ ಸರ್ಕಾರ ಪಾಠ ಕಲಿತು, ಭಕ್ತರಿಗೆ ನೀಡಬೇಕಾದ ವ್ಯವಸ್ಥೆಗಳನ್ನು ಸುಧಾರಿಸಬೇಕು ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

More articles

Latest article