ಆನೇಕಲ್: ತಾಲ್ಲೂಕಿನ ಹಿಲಲಿಗೆ ಗ್ರಾಮದಲ್ಲಿ ನಡೆಯುತ್ತಿದ್ದ ಹುಸ್ಕೂರು ಮದ್ದೂರಮ್ಮನ ರಥೋತ್ಸವದಲ್ಲಿ 120 ಅಡಿ ಎತ್ತರದ ತೇರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿರುವ ಘಟನೆ ವರದಿಯಾಗಿದ್ದು, ಯಾವುದೇ ಸಾವು ನೋವು ವರದಿಯಾಗಿಲ್ಲ.
ಟ್ರಾಕ್ಟರ್ ಗಳು ಮತ್ತು ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತಿದ್ದ ತೇರಿನ ಜೊತೆಜೊತೆಯಲ್ಲಿ ಜನರೂ ಸಹ ನಡೆದುಕೊಂಡು ಬರುತ್ತಿದ್ದರು. ಅತಿ ಎತ್ತರದ ತೇರು ಇದಾದ್ದರಿಂದ ನಿಯಂತ್ರಣ ತಪ್ಪಿ ಅದು ಕೆಳಗೆ ಬಿದ್ದಿತು. ಬಿದ್ದ ಕೂಡಲೇ ಜನರೆಲ್ಲ ಭಯದಿಂದ ಕೂಗುತ್ತ ಓಡಿಹೋಗಿದ್ದು ಪುಣ್ಯವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಈ ತೇರಿನ ಯಾತ್ರೆ ನಡೆದಿತ್ತು. ಮಾರ್ಗಮಧ್ಯೆ ಕಮ್ಮಸಂದ್ರದ ಹೈಪರ್ ಮಾರ್ಕೆಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ರಥೋತ್ಸವದ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಗ್ರಾಮಸ್ಥರು ನೆರೆದಿದ್ದರು.