ಮಹಾತ್ಮ ಗಾಂಧಿ ಹೆಸರನ್ನಷ್ಟೇ ಅಲ್ಲದೇ, ಅವರ “ಸ್ವರಾಜ್ಯ”ದ ಯೋಚನೆಯನ್ನೂ ಹೊಸಕಿಹಾಕಲು ಹೊರಟಿರುವ ಮೋದಿ ಸರ್ಕಾರದ ಬಡ ಜನ ವಿರೋಧಿ ಕ್ರಮದ ವಿರುದ್ಧವಾಗಿ ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಹೋರಾಟಕ್ಕೂ ಮುಂದಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಹೆಸರನ್ನು ಬದಲಿಇಸದ ಕೇಂದ್ರ ಸರ್ಕಾರದ ವಿರುದ್ಧ ಅವರು ಎಕ್ಸ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ VB-G RAM G ಬಿಲ್ 2025:ಮಹಾತ್ಮ ಗಾಂಧೀಜಿಯವರ ಹೆಸರನ್ನು ಅಳಿಸಿ, ಎಂ-ನರೇಗಾ ಯೋಜನೆಯ ಮೂಲ ಸ್ವರೂಪವನ್ನೇ ನಾಶಮಾಡುವ ದುರುದ್ದೇಶ ಹೊಂದಿದೆ!
ಯುಪಿಎ ಸರ್ಕಾರ ಜಾರಿಗೊಳಿಸಿದ ಈ ಯೋಜನೆ ಗ್ರಾಮೀಣ ಬಡವರಿಗೆ 100 ದಿನಗಳ ಉದ್ಯೋಗ ಖಾತರಿ ನೀಡಿ, ನಿರುದ್ಯೋಗ-ಬಡತನ ನಿರ್ಮೂಲನೆಯಲ್ಲಿ ಐತಿಹಾಸಿಕ ಪಾತ್ರ ವಹಿಸಿದೆ. ದೇಶ-ವಿದೇಶದ ತಜ್ಞರು ಶ್ಲಾಘಿಸಿದ ಈ ಹಕ್ಕು ಆಧಾರಿತ ಯೋಜನೆಯನ್ನು ಈಗ ಮೋದಿ ಸರ್ಕಾರ ಕೇಂದ್ರೀಕೃತಗೊಳಿಸಿ, ಶೇ.40 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಿರುವುದು ಅವರು ಅಧಿಕಾರಕ್ಕೆ ಬಂದ ದಿನದಿಂದ ಅನುಸರಿಸಿಕೊಂಡು ಬರುತ್ತಿರುವ ಒಕ್ಕೂಟ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ.
ಈ ಬಿಲ್ ಸ್ಥಳೀಯ ಉದ್ಯೋಗ ಖಾತರಿ ಕಸಿಯಲ್ಪಟ್ಟು, ಬಡವರು ವಲಸೆ ಹೋಗಲು ಒತ್ತಾಯಿಸಲ್ಪಡುತ್ತಾರೆ. ಜಾತಿ-ಸಾಮಾಜಿಕ ತಾರತಮ್ಯ ಇನ್ನಷ್ಟು ಆಳವಾಗಲಿದೆ! ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸಿಗೆ ಸೂಕ್ತವಾಗಿ ಹೆಸರಿಡಲಾಗಿದ್ದ ಯೋಜನೆಯಿಂದ ಬಾಪೂಜಿಯವರ ಹೆಸರನ್ನು ತೆಗೆದುಹಾಕಿರುವುದು ನಾಚಿಕೆಗೇಡು!
ವಿದೇಶದಲ್ಲಿ ಗಾಂಧಿ ಭಜನೆ ಮಾಡುವ ಮೋದಿಯವರು ದೇಶದಲ್ಲಿ ಗಾಂಧೀಜಿಯನ್ನು ಅವಮಾನಿಸುತ್ತಿದ್ದಾರೆ. ಹಿಂದಿನ ಯುಪಿಎ ಯೋಜನೆಗಳನ್ನು ಬಲಪಡಿಸದೆ ಕೇವಲ ಹೆಸರು ಬದಲಾಯಿಸಿ ಕ್ರೆಡಿಟ್ ತೆಗೆದುಕೊಳ್ಳುವುದು ಮೋದಿ ಸರ್ಕಾರದ ಗೀಳು. ಸ್ವಚ್ಛ ಭಾರತ, ಜನ್ ಧನ್, ಅಮ್ರುತ್ – ಇನ್ನೂ 25ಕ್ಕೂ ಹೆಚ್ಚು ಯೋಜನೆಗಳನ್ನು ರೀಬ್ರ್ಯಾಂಡಿಂಗ್ ಮಾಡಿ “ಹೆಸರು ಬದಲಾಯಿಸುವ ಸಚಿವಾಲಯ” ತೆರೆದಂತಿದೆ!
ಈ ಜನವಿರೋಧಿ, ಒಕ್ಕೂಟ ವಿರೋಧಿ, ಬಡವರ ವಿರೋಧಿ ನಿರ್ಧಾರವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ರಾಜ್ಯವ್ಯಾಪಿ ಹೋರಾಟ ಆರಂಭಿಸುತ್ತೇವೆ. ಲಕ್ಷಾಂತರ ಫಲಾನುಭವಿಗಳೇ, ಎದ್ದೇಳಿ! ಬಿಜೆಪಿ ನಾಯಕರನ್ನು ಪ್ರಶ್ನಿಸಿ, ಪಕ್ಷಾತೀತವಾಗಿ ಧ್ವನಿ ಎತ್ತಿ! ಎಂ-ನರೇಗಾ ಮೂಲ ಸ್ವರೂಪವನ್ನು ಉಳಿಸೋಣ ಎಂದಿದ್ದಾರೆ.

