ಮತ್ತೆ ಮುಷ್ಕರ; ರಸ್ತೆಗಿಳಿಯಲ್ಲ 9 ಲಕ್ಷ ವಾಹನಗಳು;  ಏರ್‌ ಪೋರ್ಟ್‌ ಟ್ಯಾಕ್ಸಿ, ಗೂಡ್ಸ್ ವಾಹನಗಳೂ ಬಂದ್

Most read

ಬೆಂಗಳೂರು: ಡೀಸೆಲ್ ದರ ಏರಿಕೆ ಖಂಡಿಸಿ ಇದೇ ಏಪ್ರಿಲ್ 15 ರಿಂದ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಕರೆ ನೀಡಿದೆ. ಅಂದು ರಾಜ್ಯಾದ್ಯಂತ ವಾಣಿಜ್ಯ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಗೂಡ್ಸ್ ವಾಹನಗಳು, ಏರ್‌ಪೋರ್ಟ್‌ ಟ್ಯಾಕ್ಸಿಗಳೂ ಸಹ ಸಂಪೂರ್ಣ ಬಂದ್‌ ಆಗಲಿದೆ.

ಡಿಸೇಲ್‌ ದರ ಏರಿಕೆ ಖಂಡಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಏಪ್ರಿಲ್‌ 15ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಈ ಕುರಿತು ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.‌ ಷಣ್ಮುಗಪ್ಪ ಮಾತನಾಡಿ ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ ಏರಿಕೆಯಾಗಿದೆ. ಇದರಿಂದ ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಉಂಟಾಗಿದೆ. ಸರ್ಕಾರ ಏನನ್ನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಫಿಟ್ನೆಸ್ ಶುಲ್ಕ, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 14ನೇ ತಾರೀಖು ಅಂಬೇಡ್ಕರ್ ಜಯಂತಿಯಂದು ರಾತ್ರಿಯಿಂದಲೇ ಹೋರಾಟ ಆರಂಭವಾಗಲಿದೆ. ಬೇಡಿಕೆ ಈಡೇರುವವರೆಗೆ ಕರ್ನಾಟಕದ ಒಳಗೆ ಯಾವುದೇ ವಾಹನಗಳನ್ನು ಬಿಡುವುದಿಲ್ಲ. ಇದಕ್ಕೆ ಪೆಟ್ರೋಲ್ ವಾಹನಗಳ ಮಾಲೀಕರು ಬೆಂಬಲ ಕೊಟ್ಟಿದ್ದಾರೆ, ಏರ್‌ ಪೋರ್ಟ್‌, ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಎಲ್ಲ ರೀತಿಯ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಒಟ್ಟಾರೆ  9 ಲಕ್ಷ ವಾಣಿಜ್ಯ ವಾಹನಗಳು ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.

ಏಪ್ರಿಲ್‌ 14ರ ವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ, 14ರ ರಾತ್ರಿಯಿಂದಲೇ ಹೋರಾಟ ಆರಂಭವಾಗಲಿದೆ. ಹೋರಾಟ ಆರಂಭವಾದ ನಂತರ ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ. ಚೆಕ್ ಪೋಸ್ಟ್‌ಗಳಲ್ಲಿ ನಾವೇ ಖುದ್ದು ನಿಲ್ಲುತ್ತೇವೆ ಎಂದು ಎಚ್ಚರಿಸಿದ್ದಾರೆ. ಈ ಮುಷ್ಕರಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

More articles

Latest article