ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಮತ್ತು ಭ್ರಷ್ಟಾಚಾರ ಆರೋಪ ಸಂಬಂಧ ಬೆಸ್ಕಾಂ, ಆರೋಗ್ಯ ಇಲಾಖೆ, ಬೆಂಗಳೂರು ಮಹಾನಗರ ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸ ಹಾಗೂ ಇತರ ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಯಚೂರು, ಗದಗ, ಕೊಪ್ಪಳ, ಚಿತ್ರದುರ್ಗದಲ್ಲಿ ಈ ದಾಳಿ ನಡೆದಿದೆ.
ಬೆಂಗಳೂರಿನಲ್ಲಿ ಈಸ್ಟ್ ಸರ್ಕಲ್ ಬೆಸ್ಕಾಂನ ಸೂಪರಿಂಟೆಂಡೆಂಟ್ ಎಂಜಿನಿಯರ್ (ಎಲೆಕ್ಟ್ರಿಕಲ್) ಲೋಕೇಶ್ ಬಾಬು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಸಂತಪುರ ವಾರ್ಡ್ ಸಂಖ್ಯೆ 197 ರ ಕಂದಾಯ ನಿರೀಕ್ಷಕ ಸುರೇಶ್ ಬಾಬು, ಬಿಬಿಎಂಪಿಯ ಯಲಹಂಕ ವಲಯದ ತೆರಿಗೆ ನಿರೀಕ್ಷಕ ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ. ಸುನೀಲ್ ಕುಮಾರ್ ಅವರ ಮನೆ ಮಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಆರ್. ಪಿ. ಜಾಧವ್ ಅವರ ನಿವಾಸ ಮತ್ತು ಫಾರ್ಮ್ ಹೌಸ್ ಮೇಲೆ ದಾಳಿ ನಡೆದಿದೆ. ಕೊಪ್ಪಳದಲ್ಲಿ ಅಬಕಾರಿ ನಿರೀಕ್ಷಕ ರಮೇಶ ಅಗಡಿ ಅವರ ಮನೆಯ ಮೇಲೂಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಎಲ್ಲ ಅಧಿಕಾರಿಗಳ ಬಳಿಯೂ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಈ ಅಧಿಕಾರಿಗಳ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ಎಣಿಕೆ ಮಾಡುತ್ತಿದ್ದಾರೆ.