ಬೆಂಗಳೂರು: ಐಎಎಸ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಮತ್ತು ನಗದು ಪತ್ತೆ ಮಾಡಿದ್ದಾರೆ.
ಕೆ–ರೈಡ್ ವಿಶೇಷ ಉಪ ಆಯುಕ್ತೆ ಬಿ.ವಿ. ವಾಸಂತಿ ಅಮರ್ ಅವರೂ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 8 ಅಧಿಕಾರಿಗಳ ಮನೆಗಳಲ್ಲಿ ಶೋಧ ನಡೆಸಿ, ಒಟ್ಟು ರೂ. 37.41 ಕೋಟಿಯಷ್ಟು ಮೌಲ್ಯದ ಸಂಪತ್ತನ್ನು ಪತ್ತೆ ಮಾಡಲಾಗಿದೆ. ಇವರೆಲ್ಲರ ಪೈಕಿ ವಾಸಂತಿ ಅವರು ಹೊಂದಿರುವ ಆಸ್ತಿಯ ಮೌಲ್ಯವೇ ಅತಿಹೆಚ್ಚು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ವಾಸಂತಿ ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ ರೂ. 9.02 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆರ್.ಟಿ.ನಗರದ ವಾಸಂತಿ ಅವರ ಮನೆ, ರಾಜ್ಯದ ವಿವಿಧೆಡೆ ಅವರ ಆಪ್ತರ ಮನೆಗಳು ಸೇರಿ ಒಟ್ಟು ಐದು ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಅವರ ಹೆಸರಿನಲ್ಲಿ ರೂ.7.40 ಕೋಟಿ ಮೌಲ್ಯದ 4 ವಾಸದ ಮನೆಗಳು, ಮೂರು ನಿವೇಶನಗಳು ಮತ್ತು 3 ಎಕರೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ. ವಾಸಂತಿ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಈಗಿನ ಮಾರುಕಟ್ಟೆ ಮೌಲ್ಯ ರೂ.90 ಲಕ್ಷ ಮೌಲ್ಯದ ಮೂರು ಕಾರುಗಳಿವೆ. ಜತೆಗೆ ಅವರ ಮನೆಯಲ್ಲಿ ಒಟ್ಟು ರೂ.12 ಲಕ್ಷ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಆಗಿದ್ದಾಗ ಇವರು ಸರ್ಕಾರಿ ಜಮೀನೊಂದನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದಲ್ಲಿ ವಾಸಂತಿ ಅವರ ವಿರುದ್ಧ ಕಂದಾಯ ಇಲಾಖೆ ನೀಡಿದ್ದ ದೂರನ್ನು ಆಧರಿಸಿ, ಜುಲೈ 16ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಶೇಖು ಚವ್ಹಾಣ್ ಅವರ ಮನೆಯಲ್ಲಿ ಶೋಧದ ವೇಳೆ ರೂ.52 ಲಕ್ಷ ನಗದು ಪತ್ತೆಯಾಗಿದೆ. ನಗದನ್ನು ಎಣಿಕೆ ಮಾಡಲು ಹಲವು ಗಂಟೆಗಳು ಹಿಡಿದವು ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ. ಇವರ ಬಳಿ ರೂ. 2.47 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರು ಎಂಟು ಅಧಿಕಾರಿಗಳಿಗೆ ಸೇರಿದ ಒಟ್ಟು 41 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಸಂಬಂಧ ಈ ಎಲ್ಲ ಅಧಿಕಾರಿಗಳ ವಿರುದ್ಧ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.