ಬೆಂಗಳೂರು: ಮೀಟರ್ ಬಡ್ಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಪಟ್ಟಿ ದಾಖಲಿಸಲು ರೂ. 5000 ರೂ. ಲಂಚ ಪಡೆಯುತ್ತಿದ್ದಾಗ ಆವಲಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕೋನದಾಸಪುರ ನಿವಾಸಿ ಪವಿತ್ರ ಎಂಬುವರು ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ಜಾತಿನಿಂದನೆ ಕಾಯ್ದೆ ಅಡಿಯಲ್ಲೂ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಸಹಾಯಕ ತನಿಖಾಧಿಕಾರಿ ಮಧುಸೂದನ್ ಮತ್ತು ಠಾಣಾ ಸಿಬ್ಬಂದಿ ಮಹೇಶ್ ರೂ. 5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಪವಿತ್ರ ಅವರು ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ದೂರುದಾರರು ಪೊಲೀಸ್ ಠಾಣೆಯ ಬಳಿ ಆರೋಪಿಗಳಿಗೆ ಲಂಚದ ಹಣ ನೀಡಿದ್ದರು. ಕೂಡಲೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.