ಮಂಗಳೂರು: ವಿಧಾನಸೌಧದ ಅವರಣದಲ್ಲಿ ಸಾಹಿತ್ಯ ಉತ್ಸವ, ಸಾಂಸ್ಕೃತಿಕ ಉತ್ಸವ, ಪುಸ್ತಕ ಮೇಳ, ಆಹಾರ ಮೇಳಗಳನ್ನು ಇದೇ 27ರಿಂದ ಮಾರ್ಚ್ 3 ರವರೆಗೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಸಾಹಿತಿಗಳು, ಬರಹಗಾರರು, ವಿದ್ವಾಂಸರನ್ನು ವಿಧಾನಸಭೆಗೆ ಹತ್ತಿರವಾಗಿಸುವ ಉದ್ದೇಶದಿಂದ ಸಾಹಿತ್ಯ ಉತ್ಸವ ಹಮ್ಮಿಕೊಳ್ಳಲಾಗುತ್ತಿದೆ. ಒಬ್ಬ ಸಾಹಿತಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿದೆ. ಭದ್ರತೆ ದೃಷ್ಟಿಯಿಂದ ವಿಶೇಷ ತಪಾಸಣಾ ವ್ಯವಸ್ಥೆ ಮಾಡುತ್ತೇವೆ. ಈ ಸಾಹಿತ್ಯ ಉತ್ಸವವನ್ನು ಪ್ರತಿ ವರ್ಷವೂ ಏರ್ಪಡಿಸಬೇಕು ಎಂಬುದು ನಮ್ಮ ಉದ್ಧೇಶವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿವಿಧ ಅಕಾಡೆಮಿಗಳು, ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು ಹಾಗೂ ಖಾಸಗಿ ಪ್ರಕಾಶನ ಸಂಸ್ಥೆಗಳ ಮಳಿಗೆಗಳು ಸೇರಿದಂತೆ 150 ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಉತ್ಸವದಲ್ಲಿ ಕನ್ನಡ ಭಾಷೆಗೆ ಶೇ 80ರಷ್ಟು ಹಾಗೂ ಇತರ ಭಾಷೆಗಳಿಗೆ ಶೇ. 20ರಷ್ಟು ಪ್ರಾಧಾನ್ಯತೆ ನೀಡಲಿದ್ದೇವೆ. ಎರಡು ವೇದಿಕೆಗಳಲ್ಲಿ ಸಾಹಿತ್ಯ ಕುರಿತ ಚರ್ಚೆ, ಸಂವಾದಗಳು ನಡೆಯಲಿವೆ. ಸಂಜೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪುಸ್ತಕ ಬಿಡುಗಡೆಗೂ ವೇದಿಕೆ ಕಲ್ಪಿಸುತ್ತೇವೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಪುಸ್ತಕ ಖರೀದಿಸಿ ಕ್ಷೇತ್ರದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಹಾಗೂ ಗ್ರಂಥಾಲಯಗಳಿಗೆ ಪೂರೈಸಲು ವಿಶೇಷ ಅವಕಾಶ ಕಲ್ಪಿಸಲಿದ್ದೇವೆ. ಯಾವ ಪುಸ್ತಕ ಬೇಕು ಎಂಬ ಬಗ್ಗೆ ಅವರು ಆಯಾ ಶಾಲಾ ಕಾಲೇಜುಗಳಿಂದ ಅಥವಾ ಗ್ರಂಥಾಲಯದವರಿಂದ ಸಲಹೆ ಪಡೆದು ಖರೀದಿಸಬಹುದು. ಕೆಲವು ಸರ್ಕಾರಿ ಕಾಲೇಜುಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಲಭ್ಯ ಇರುವುದಿಲ್ಲ. ಈ ಕೊರತೆ ನೀಗಿಸಲು ಅವಕಾಶ ಸಿಗಲಿದೆ ಎಂದರು.
ಸಾಹಿತ್ಯ ಉತ್ಸವ ಆಯೋಜನೆಗಾಗಿ ವಿಧಾನಸಭೆ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಪೊಲೀಸ್ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಎಡ, ಬಲ ಎಂಬ ಭೇದಬಾವ ಮಾಡದೇ ಎಲ್ಲರಿಗೂ ಮುಕ್ತ ಅವಕಾಶ ನೀಡುವುದು ನಮ್ಮ ಉದ್ದೇಶ. ಕಾರ್ಯಕ್ರಮ ಆಯೋಜನೆ ಬಗ್ಗೆ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ. ಅದರಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಾಹಿತ್ಯ ಉತ್ಸವಕ್ಕೆ ಸೂಕ್ತ ಹೆಸರು ಇಡಲು ಹಾಗೂ ಲಾಂಛನ ರಚಿಸಲು ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡುತ್ತೇವೆ. ಉತ್ತಮ ಹೆಸರು ಸೂಚಿಸುವವರಿಗೆ ಹಾಗೂ ಲಾಂಛನ ರಚಿಸುವವರಿಗೆ ಸೂಕ್ತ ಬಹುಮಾನವಿದೆ. ಆಸಕ್ತರು ಹೆಸರು ಅಥವಾ ಲಾಂಛನ ವನ್ನು ಸಚಿವಾಲಯಕ್ಕೆ ಇ–ಮೇಲ್ ಮಾಡಬಹುದು ([email protected]) ಅಥವಾ ವಾಟ್ಸ್ ಆ್ಯಪ್ (9448108798) ಮೂಲಕವೂ ಕಳುಹಿಸಬಹುದು ಎಂದು ತಿಳಿಸಿದರು.
ವಿಧಾನ ಮಂಡಲಗಳ ಅಧಿವೇಶನವನ್ನು ಮಾರ್ಚ್ 3ರಿಂದ ಆರಂಭಿಸುವ ಹಾಗೂ ಮಾರ್ಚ್ 7ರಂದು ಬಜೆಟ್ ಮಂಡನೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರವೇ ದಿನಾಂಕವನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದರು.
ವಿಧಾನ ಸೌಧದ ಆವರಣದಲ್ಲಿ ಬೀದಿನಾಯಿ ಹಾವಳಿ ನಿಯಂತ್ರಣದ ಬಗ್ಗೆ ಶೀಘ್ರವೇ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಶಾಸಕರನ್ನು ವಿಧಾನಸಭೆಯಿಂದ ಹೊರಗೆ ಕಳುಹಿಸುವ ಅಧಿಕಾರವಿದೆ. ಆದರೆ ಈ ಬೀದಿ ನಾಯಿಗಳನ್ನು ಹೊರಗೆ ಕಳುಹಿಸುವಂತಿಲ್ಲ. ಅವುಗಳ ಹಕ್ಕುಗಳನ್ನು ಗೌರವಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರಾಣಿ ದಯಾ ಸಂಘದವರನ್ನೂ ಕರೆಸಿ ಸಮಾಲೋಚನೆ ನಡೆಸಿ ಕ್ರಮವಹಿಸುತ್ತೇವೆ ಎಂದರು.
ವಿಧಾನ ಸೌಧಕ್ಕೆ ಶಾಶ್ವತ ದೀಪಾಲಂಕಾರ
‘ವಿಧಾನಸೌಧಕ್ಕೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವಿದ್ಯುದ್ದೀಪಾಲಂಕಾರ ಮಾಡಲಾಗುತ್ತಿದೆ. ಅದರ ಬದಲು ಇದಕ್ಕೆ ಶಾಶ್ವತ ವ್ಯವಸ್ಥೆ ರೂಪಿಸಿ ಪ್ರತಿ ಶನಿವಾರ ಭಾನುವಾರವೂ ವಿದ್ಯುದ್ದೀಪಾಲಂಕಾರ ಮಾಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಣಕಾಸು ಇಲಾಖೆ ಜೊತೆ ಚರ್ಚಿಸಿದ್ದೇನೆ. ಈ ಪ್ರಸ್ತಾವಕ್ಕೆ ಸರ್ಕಾರವೂ ಒಪ್ಪಿದೆ. ಶೀಘ್ರವೇ ಇದಕ್ಕೆ ಟೆಂಡರ್ ಕರೆಯಲಾಗುತ್ತದೆ’ ಎಂದರು.