ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರು ಇನ್ನು ಮುಂದೆ ಬೇರೆ ಜಿಲ್ಲೆಗಳಿಂದ ಮದ್ಯ ತಂದು ಸೇವಿಸಬಾರದು ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಹೋಂಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಮೊನ್ನೆ (ಮಂಗಳವಾರ) ಚಿಕ್ಕಮಗಳೂರು ಅಬಕಾರಿ ಇಲಾಖೆಯ ಉಪಆಯುಕ್ತರು ಹೋಂಸ್ಟೇ ಮಾಲೀಕರ ಸಂಘಕ್ಕೆ ಸಭೆ ಕರೆದು ಈ ನಿರ್ಣಾಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ‘ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ’ ಎಂದು ಹೋಂಸ್ಟೇ ಮಾಲೀಕರು ಎತ್ತಿದ ಪ್ರಶ್ನೆಗೆ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಿಲ್ಲ.
‘ಜಿಲ್ಲೆಯಲ್ಲಿ ಮದ್ಯ ಮಾರಾಟ ಕುಸಿತ ಕಂಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೋಂಸ್ಟೇಗೆ ಬರುವ ಅತಿಥಿಗಳು ಹೊರ ಜಿಲ್ಲೆಗಳಿಂದ ಲಿಕ್ಕರ್ ತರುವುದರಿಂದ ನಮ್ಮ ಟಾರ್ಗೆಟ್ ತಲುಪುತ್ತಿಲ್ಲ’ ಎಂದು ಅಬಕಾರಿ ಪೊಲೀಸರು ಹೇಳಿದ್ದಾರೆ. ಹೋಂಸ್ಟೇಗೆ ಬರುವ ಅತಿಥಿಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಮದ್ಯ ಖರೀದಿಸಿ ರಶೀದಿ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ಹೋಂಸ್ಟೇ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಗೆ ನೀಡಿದ್ದಾರೆ.
ಕನ್ನಡ ಪ್ಲಾನೆಟ್ ಜೊತೆ ಅಬಕಾರಿ ಇಲಾಖೆಯ ಪೊಲೀಸ್ ರಮೇಶ್ ಮಾತನಾಡಿ ‘ತಾಲೂಕು ಮಟ್ಟದಲ್ಲಿ ನಮಗೆ ಕೊಟ್ಟಿರುವಂತಹ ಟಾರ್ಗೆಟ್ ತಲುಪಿಸಲು ಈ ರೀತಿ ಕ್ರಮಕೈಗೊಂಡಿದ್ದೇವೆ. ಬೇರೆ ಜಿಲ್ಲೆಗಳಿಂದ ಲಿಕ್ಕರ್ ತಂದು ಕುಡಿಯುವುದು ಸಾಮಾನ್ಯವಾಗಿದೆ. ನಮ್ಮ ಚಿಕ್ಕಮಗಳೂರು ತಾಲೂಕಿನಲ್ಲಿ ವ್ಯಾಪಾರ ಕಡಿಮೆ ಆಗುತ್ತದೆ’ ಎಂದರು.