ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ನಿವಾಸ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಒಟ್ಟು 8 ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದು, ಇವರ ಆಸ್ತಿ, ಚಿನ್ನಾಭರಣಗಳ ಸಂಗ್ರಹ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಬೆರಗಾಗಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಉಮೇಶ್, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರವೀಂದ್ರ, ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯಕ್ ವಾಡ್, ತುಮಕೂರು ಪ್ರಾದೇಶಿಕ ಸಾರಿಗೆ ಕಚೇರಿಯ ನಿವೃತ್ತ ಸಾರಿಗೆ ಅಧಿಕಾರಿ ಎಸ್.ರಾಜು, ಬಳ್ಳಾರಿ ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಲೋಕೇಶ್, ರಾಯಚೂರು ಜಿಲ್ಲೆಯ ಬೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಹುಲಿರಾಜ್ ಹಾಗೂ ಗದಗ-ಬೆಟಗೇರಿ ನಗರಸಭೆ ಎಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆದಿದೆ. ಕೆಲವು ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ತೋಟದ ಮನೆಗಳ ಮೇಲೂ ಏಕಕಾಲದಲ್ಲಿ ದಾಳಿ ಮಾಡಲಾಗಿದ್ದು, ಅಕ್ರಮ ಆಸ್ತಿ ಸಂಪಾದನೆಯ ದಾಖಲೆ ಪತ್ರಗಳ ಸಹಿತ ವ್ಯಾಪಕ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಡೂರು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಎನ್.ಉಮೇಶ್ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. 1995 ರಲ್ಲಿ ವೈದ್ಯರಾಗಿ ಸೇವೆಗೆ ಸೇರಿದ್ದು, 2020ರಿಂದ 2023ರ ಅವಧಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಆದಾಯಕ್ಕೂ ಮೀರಿ ತಮ್ಮ ಮತ್ತು ಪತ್ನಿ ಟಿ.ಎನ್.ಮಂಜುಳಾ ಹೆಸರಿನಲ್ಲಿ ಆಸ್ತಿ ಸಂಪಾದಿಸಿದ್ದಾರೆ ಎಂದು ತಿಳಿದು ಬಂದಿದೆ. ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಅವರ ಬೆಳಗಾವಿ ನಗರದ ಲಕ್ಷ್ಮೀಟೆಕ್ನಲ್ಲಿರುವ ನಿವಾಸ, ನಿಪ್ಪಾಣಿಯ ನಿವಾಸ ಸೇರಿ 6 ಕಡೆ ದಾಳಿ ನಡೆದಿದೆ. ನಿವೃತ್ತ ಸಾರಿಗೆ ಅಧಿಕಾರಿ ಎಸ್.ರಾಜು ಅವರ ಆಪ್ತ, ದಿಬ್ಬೂರು ನಿವಾಸಿ ಸತೀಶ್ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜು ಅವರಿಗೆ ಸಂಬಂಧಿಸಿದ ಬೆಂಗಳೂರಿನ ಎರಡು, ಬಳ್ಳಾರಿಯ ಒಂದು ಮನೆ ಮತ್ತು ತುಮಕೂರಿನ ದಿಬ್ಬೂರು ಬಳಿಯ ರಾಜು ಆಪ್ತ ಸತೀಶ್ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಲೋಕೇಶ್ ಅವರ ರಾಮಾಂಜನೇಯ ನಗರದಲ್ಲಿರುವ ಮನೆ, ಅವರ ಸ್ನೇಹಿತರ ಮನೆಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ.