ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಎಲ್‌ಐಸಿ ಏಜೆಂಟರ ನಿಯೋಗವೊಂದು ಭೇಟಿ ಮಾಡಿ ಚರ್ಚೆ ನಡೆಸಿದೆ. ಸಂಸತ್ ಭವನದಲ್ಲಿ ಈ ಭೇಟಿ ನಡೆದಿದೆ. ಈ ಸಂದರ್ಭದಲ್ಲಿ ಬಡವರು ಮತ್ತು ಅತ್ಯಂತ ಹಿಂದುಳಿದವರಿಗೆ ಕೈಗೆಟುಕುವ ವಿಮೆ ಒದಗಿಸಲು ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ರಾಹುಲ್ ಗಾಂಧಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಇಂದು ನಾನು ಎಲ್‌ಐಸಿ ಏಜೆಂಟರ ನಿಯೋಗವನ್ನು ಭೇಟಿಯಾಗಿದ್ದೇನೆ. ಐಆಡಿಎಐ ಮತ್ತು ಎಲ್ ಐಸಿ ನಿಯಮಗಳಲ್ಲಿ ಇತ್ತೀಚಿನ ಬದಲಾವಣೆಗಳ ಕುರಿತು ಎಲ್ ಐಸಿ ಏಜೆಂಟರು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಈ ನೀತಿಯಿಂದ ಬಡ ಹಾಗೂ ಹಿಂದುಳಿದವರಿಗೆ ತೊಂದರೆಯಾಗಲಿದ್ದು, ಏಜೆಂಟರನ್ನು ದುರ್ಬಲಗೊಳಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
1956ರಲ್ಲಿ ಎಲ್‌ಐಸಿ ರಚನೆಯಾದಾಗ ದೇಶದ ಜನರಿಗೆ, ವಿಶೇಷವಾಗಿಯೂ ಯಾವುದೇ ಸಾಮಾಜಿಕ ಭದ್ರತೆ ಇಲ್ಲದ ಬಡವರಿಗೆ ಕೈಗೆಟುಕುವ ವಿಮೆ ಒದಗಿಸುವ ಉದ್ದೇಶವನ್ನು ಹೊಂದಿತ್ತು. ಎಲ್‌ಐಸಿಯ ಸಮಗ್ರ ದೂರದೃಷ್ಟಿಯ ರಕ್ಷಣೆಗಾಗಿ ನಾನು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.