ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ಹುದ್ದೆಗೆ ಅರ್ಹತೆ ಪಡೆದರೂ ನೇಮಕಾತಿ ಆದೇಶ, ಸ್ಥಳ ನಿಯುಕ್ತಿ ಇಲ್ಲದೆ ನೊಂದಿರುವ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ದಯಾಮರಣ ಕೋರಿ ರಾಜ್ಯಪಾಲರಿಗೆ ಅಂಚೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
2021ರಲ್ಲಿ ನಡೆದ ಪರೀಕ್ಷೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದೆ ಅರ್ಹತೆ ಪಡೆದೂ ನಿರುದ್ಯೋಗಿಯಾಗಿರುವ ನಮ್ಮ ಅತಂತ್ರ ಸ್ಥಿತಿ ಮಾನಸಿಕ ವೇದನೆಯನ್ನು ಉಂಟು ಮಾಡುತ್ತಿದೆ. ಇದರಿಂದ ಪ್ರತಿ ಕ್ಷಣವೂ ಮಾನಸಿಕವಾಗಿ ಕುಗ್ಗಿ ಹೋಗಿ ಹಿಂಸೆ ಅನುಭವಿಸುವಂತಾಗಿದೆ.
ಯಾವುದೇ ಉದ್ಯೋಗವಿಲ್ಲದೇ ನನ್ನ ಮತ್ತು ನನ್ನ ಕುಟುಂಬವನ್ನು ಸಲಹುವುದು ಕಷ್ಟವಾಗಿದೆ. ಎಲ್ಲ ಪದವಿ ಉದ್ಯೋಗದ ಅರ್ಹತೆ ಪಡೆದೂ ನಿರುದ್ಯೋಗಿ ಜೀವನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡು ಮನೆಯವರಿಗೆ, ನಂಬಿದವರಿಗೆ, ಸಂಬಂಧಿಕರಿಗೆ ಅವಮಾನಿಸಿ ನೋವು ನೀಡುವ ಬದಲು ದಯಾಮರಣವನ್ನು ನೀಡಬೇಕು ಎಂದು ರಾಜ್ಯಪಾಲರಲ್ಲಿ ಅವಲತ್ತುಕೊಂಡಿದ್ದಾರೆ.
ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಅರ್ಹತೆ ಪಡೆದರೂ, ಆದೇಶಪತ್ರವಿಲ್ಲದೆ ಪ್ರತಿಕ್ಷಣ ಕೊರಗಿ ಸಾಯುವುದಕ್ಕಿಂತ ಮೊದಲೇ ತಾವು ದಯಾಮರಣವನ್ನು ದಯಪಾಲಿಸಬೇಕು ಎಂದು ಕೋರಿದ್ದಾರೆ.