ಹಾಸನ: ಹಾಸನ ಜಿಲ್ಲೆಯಲ್ಲಿ ಸುದೀರ್ಘ ಕಾಲದಿಂದಲೂ ಪಾಳೆಗಾರಿಕೆಯ ದರ್ಪದಿಂದ ನಡೆದಿರುವ ದೌರ್ಜನ್ಯಗಳಿಗೆ ಕೊನೆ ಹಾಡೋಣ. ಸಮಗ್ರ ನ್ಯಾಯ ಪಡೆಯಲು ಐತಿಹಾಸಿಕ ಹೋರಾಟ ನಡೆಸಬೇಕಿದೆ. ನ್ಯಾಯಾಂಗ ಹೋರಾಟ ಬಳ್ಳಾರಿಯ ಗಣಿ ಧಣಿಗಳ ಪಾಳೆಗಾರಿಕೆಯನ್ನು ಅಂತ್ಯ ಕಾಣಿಸಿದಂತೆ, ಹಾಸನದ ಪಾಳೆಗಾರಿಕೆಯನ್ನು ಅಂತ್ಯ ಮಾಡಲು ನ್ಯಾಯಾಂಗ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ನನ್ನ ಕೊನೆ ಉಸಿರು ಇರುವವರೆಗೂ ಸಹಕಾರ ನೀಡುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ ಹಿರೇಮಠ್ ಹೇಳಿದರು.
ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹೋರಾಟದ ನಡಿಗೆ ಹಾಸನದ ಕಡೆಗೆ ಎಂಬುದರ ಜತೆಗೆ ಸಮಾನತೆಯ ಕಡೆಗೆ ಆಗಬೇಕು. ಮಹಾಡ್ ಸತ್ಯಾಗ್ರಹವನ್ನು ಅಂಬೇಡ್ಕರ್ ನಡೆಸಿದ್ದರು. ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದು ಅಂತ ಕೊಚ್ಚಿಕೊಳ್ಳುತ್ತಿದ್ದ ಬ್ರಿಟಿಷರನ್ನು ವಾಪಸ್ ಕಳಿಸಲು ಸತ್ಯಾಗ್ರಹದ ಹೋರಾಟ ನಡೆಯಿತು. ಇತ್ತೀಚಿಗೆ ಸಾಮೂಹಿಕ ನಾಯಕತ್ವದಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತ ಹೋರಾಟದಲ್ಲಿ ಲಕ್ಷಗಟ್ಟಲೆ ಜನ ಅಹಂಕಾರಿ, ಅಸಹಿಷ್ಣುತೆಯ ಪ್ರತೀಕವಾಗಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಬಗ್ಗಿಸಿದರು. ಇಂದು ಹಾಸನದಲ್ಲಿ ಮಹಿಳೆಯರ ಸಮಾನತೆಯ ಕಡೆಗೆ ಕೊಂಡೊಯ್ಯಲು ಹೋರಾಟ ನಡೆಯುತ್ತಿದೆ. ಇದು ದೊಡ್ಡಮಟ್ಟಕ್ಕೆ ಬೆಳೆಯಬೇಕು ಎಂದರು.
ಈ ರಾಜ್ಯದ ಗೃಹಮಂತ್ರಿ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ಈಗಾಲಾದರೂ ಹಾಸನಕ್ಕೆ ಬನ್ನಿ ನೊಂದ ಮಹಿಳೆಯರ ದನಿ ಕೇಳಿ ನ್ಯಾಯ ನೀಡಿ ಎಂದು ಅವರು ಆಗ್ರಹಿಸಿದರು.