ಬೆಂಗಳೂರು: ದೇಶವು ಈಗಾಗಲೇ ನೋಡುತ್ತಿರುವುದನ್ನು ಬಿಜೆಪಿ ಸಂಸದರು ಸಹ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಮುಖಂಡರೂ ಆದ ಸುಬ್ರಮಣಿಯನ್ ಸ್ವಾಮಿ ಅವರ ಪೋಸ್ಟ್ ಹಂಚಿಕೊಂಡಿರುವ ಅವರು, ಆರ್‌ಎಸ್‌ಎಸ್ ಸಖ್ಯದಿಂದ ಹೊರ ಬಂದರೆ ಬಿಜೆಪಿ ಕೇವಲ ಒಂದು ಗಂಭೀರ ಪ್ರಾದೇಶಿಕ ಪಕ್ಷವಾಗಿ ಕೂಡ ಅರ್ಹತೆ ಪಡೆಯುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಪ್ರಧಾನಿಯಾಗಿ ವಿಫಲರಾಗಿದ್ದಾರೆ ಮತ್ತು ದೇಶಕ್ಕೆ ಒಂದು ಮುಜುಗರವಾಗಿ ಪರಿಣಮಿಸಿದ್ದಾರೆ. ಭಾರತವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ಆರ್‌ಎಸ್‌ಎಸ್‌ನಂತಹ ನೋಂದಾಯಿಸದ & ನಿಯಮಗಳಿಗೆ ಒಳಪಡದ ಸಂಘಟನೆಯು ಏಕೆ ನಿರ್ಧರಿಸಬೇಕು? ನೀವು ಅಖಾಡದಿಂದ ಆರ್‌ಎಸ್‌ಎಸ್ ಅನ್ನು ತೆಗೆದುಹಾಕಿ, ಆಗ ಬಿಜೆಪಿ ಕೇವಲ ಒಂದು ಗಂಭೀರ ಪ್ರಾದೇಶಿಕ ಪಕ್ಷವಾಗಿ ಕೂಡ ಅರ್ಹತೆ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸ್ಥಾನದಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಸಂಘ ಪರಿವಾರ ಆರ್‌ಎಸ್‌ಎಸ್ ಸೂಚನೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಮೋದಿಯವರು ಟ್ರಂಪ್ ಅವರ ಹಿಂಬಾಲಕರಾಗಿರುವುದು ಭಾರತದ ಪ್ರಜಾಪ್ರಭುತ್ವ ಮತ್ತು ಬಿಜೆಪಿಗೆ ಅಪಾಯಕಾರಿ ಬೆಳವಣಿಗೆಯಾಗಲಿದೆ. ಹಾಗಾಗಿ, ಅವರು ನಿವೃತ್ತಿ ತೆಗೆದುಕೊಳ್ಳುವಂತೆ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಾಮಾನ್ಯ ಸಭೆ ಸೂಚನೆ ನೀಡಬೇಕು ಎಂದು ಪೋಸ್ಟ್ ಮಾಡಿದ್ದರು.
ಸುಬ್ರಮಣಿಯನ್ ಸ್ವಾಮಿಯವರ ಈ ಪೋಸ್ಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

