ಬಿಜೆಪಿಯವರಿಗೆ ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ: ಡಿಸಿಎಂ ಶಿವಕುಮಾರ್‌ ವಾಗ್ದಾಳಿ

Most read

ಬೆಳಗಾವಿ: ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ರಾಜ್ಯದ ನೆರವಿಗೆ ಧಾವಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕತೆ ಬಿಜೆಪಿಗೆ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕಬ್ಬು, ಮೆಕ್ಕೆಜೋಳ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದಾಗ ಕೇಂದ್ರ ಸರ್ಕಾರ ರೈತರ ಕೈ ಹಿಡಿಯಲಿಲ್ಲ. ಎಥೆನಾಲ್‌ ಖರೀದಿ ಸಾಮರ್ಥ್ಯವನ್ನು ವಿಸ್ತರಣೆ ಮಾಡಿ ಎಂದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಯಾವ ಯೋಜನೆಗಳಿಗೂ ಸರಿಯಾದ ಅನುದಾನ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಬಳಿ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಕಾವೇರಿ ನದಿಗೆ ಅಡ್ಡವಾಗಿ ಮೇಕೆದಾಟು ಸಮತೋಲಿತ ಅಣೆಕಟ್ಟು ನಿರ್ಮಿಸಲು ನ್ಯಾಯಾಲಯದಲ್ಲಿ ನಮ್ಮ ಹೋರಾಟಕ್ಕೆ ಜಯಸಿಕ್ಕಿದೆ. ಲೋಕಸಭೆಗೆ ಆಯ್ಕೆಯಾದರೆ ಮೇಕೆದಾಟು ನಿರ್ಮಾಣಕ್ಕೆ ಒಂದೇ ದಿನದಲ್ಲಿ ಅನುಮತಿ ಕೊಡಿಸುವುದಾಗಿ ಹೆಚ್‌.ಡಿ.ಕುಮಾರಸ್ವಾಮಿ ಹೇಳುತ್ತಿದ್ದರು. ಇದುವರೆಗೂ ಒಪ್ಪಿಗೆ ಕೊಡಿಸಲು ಅವರಿಂದ ಆಗಿಲ್ಲ ಎಂದು ಟೀಕಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗಾಗಿ 5,400 ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಕೇಂದ್ರ ಅರ್ಥ ಸಚಿವೆ ನಿರ್ಮಲ ಸೀತಾರಾಮನ್‌ ಬಜೆಟ್‌ ನಲ್ಲಿ ಪ್ರಕಟಿಸಿದ್ದರು. ಆದರೆ ಒಂದೇ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ನ್ಯಾಯಾಧೀಕರಣದ ತೀರ್ಪಿನ ಅಧಿಸೂಚನೆ ಹೊರಡಿಸಬೇಕು. ಅದಕ್ಕೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.  ಇಷ್ಟೆಲ್ಲಾ ಸಮಸ್ಯೆಗಳಿದ್ದರೂ  ಬಿಜೆಪಿಯ ರಾಜ್ಯ ಸಂಸದರು ಸಂಸತ್‌ ನಲ್ಲೂ ಮಅತನಾಡುವುದಿಲ್ಲ ಅಥವಾ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ವಸ್ತುಸ್ಥಿತಿ ಹೀಗಿರುವಾಗ ರಾಜ್ಯ ಬಿಜೆಪಿ ಮುಖಂಡರಿಗೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲು ಮರ್ಯಾದೆ ಇದೆಯೇ ಎಂದು ಕಿಡಿ ಕಾರಿದರು.

More articles

Latest article