ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ಪ್ರಜಾಪ್ರಭುತ್ವದ ಸಂಸ್ಥೆಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು. ಹಾಗಾದಾಗ ಮಾತ್ರ ಸಮಾಜದ ಸಮ ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕಾನೂನು ಬಲ್ಲ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ದಿನಾಚರಣೆ ಉದ್ಘಾಟಿಸಿ ಹಾಗೂ ವಕೀಲರ ವೇದಿಕೆ ಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೂಡಿಸಬೇಕು. ಯಾವುದೇ ಕಾರಣಕ್ಕೂ ಅನ್ಯಾಯದ ಪರ ನಿಲ್ಲಬಾರದು. ಸಮಾಜದಲ್ಲಿ ಬದಲಾವಣೆ ತರಬೇಕಾದರೆ ವಕೀಲರು ಪ್ರಯತ್ನ ಮಾಡಬೇಕು ಎಂದರು.

ವಕೀಲರಿಗೆ  ರಕ್ಷಣಾ ಕಾಯ್ದೆ: ಶಾಸಕಾಂಗದ ಪ್ರಯತ್ನ ವಕೀಲರ ರಕ್ಷಣಾ ಕಾಯ್ದೆ ಬಹು ದಿನಗಳಿಂದ ಬೇಡಿಕೆಯಲ್ಲಿ ಇದ್ದಂತ  ವಿಚಾರ. ವಕೀಲರಿಗೆ ರಕ್ಷಣೆ ಅಗತ್ಯವಿದ್ದುಅದಕ್ಕೊಂದು ಕಾನೂನಿನ ಚೌಕಟ್ಟನ್ನು ಒದಗಿಸಿಕೊಡಲು ಶಾಸಕಾಂಗ ಪ್ರಯತ್ನ ಮಾಡಿದ್ದು, ಅದರ ಫಲಶ್ರುತಿಯಾಗಿಯೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬಂದಿದೆ ಎಂದರು.

ಹಿಂದೆ ವಕೀಲರಿಗೆ ಭರವಸೆ ನೀಡಿದ್ದಂತೆ ಕಾಯ್ದೆ ರೂಪಿಸಿದ್ದೇವೆ. ಇಂದಿನ ದಿನಗಳಲ್ಲಿ ವಕೀಲರು ಬೆದರಿಕೆ, ಕಿರುಕುಳ, ಕೆಲಸ ಕಾರ್ಯಗಳಿಗೆ  ಅಡ್ಡಿಪಡಿಸುವಂತಹ ಅನೇಕ ಆತಂಕಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು ಒಂದು ಕಾಯ್ದೆಯ ಅವಶ್ಯಕತೆ ಇದೆ.ಆ ಕಾಯ್ದೆ ಅತ್ಯಂತ ಅವಶ್ಯ ಎಂದು ಮನಗಂಡು ವಿಧಾನಸಭೆ, ಪರಿಷತ್ ಎರಡೂ ಕಡೆ ಮಂಡಿಸಿ ಅಂಗೀಕಾರವಾಗಿ ರಾಜ್ಯಪಾಲರ ಅಂಕಿತ ಪಡೆದು ಈಗ ಕಾಯ್ದೆಯಾಗಿದೆ. ಈ ಕಾಯ್ದೆ ಯಿಂದಾಗಿ ವಕೀಲರಿಗೆ ರಕ್ಷಣೆ ಸಿಕ್ಕಿದೆ. ಕಾಯ್ದೆಯಿಂದ  ಕೇವಲ ನಿಮ್ಮ ರಕ್ಷಣೆ ಆದರೆ ಸಾಲದು ನಾಡಿನ ಜನರ, ನ್ಯಾಯ ಕೇಳಿ ಬರುವವರ ರಕ್ಷಣೆ ಆಗಬೇಕು ಎಂದರು.

ಸಂವಿಧಾನ ಓದಿ, ಪಾಲಿಸಿ:

ಕೇವಲ ಸಂವಿಧಾನ ಪರಿಣಿತರೇ ಸಂವಿಧಾನವನ್ನು  ಓದಬೇಕೆಂದೇನೂ ಇಲ್ಲ. ಆ ಭಾವನೆ ಬಿಟ್ಟು ವಕೀಲ ವೃತ್ತಿಯಲ್ಲಿ ಇರುವ ಎಲ್ಲರೂ, ಪ್ರತಿಯೊಬ್ಬರೂ ಸಂವಿಧಾನದ ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು  ಪಾಲಿಸಬೇಕು. ನಮ್ಮದು ಅತ್ಯಂತ ಶ್ರೇಷ್ಠ ಸಂವಿಧಾನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ, ನಮ್ಮ ಸಮಾಜಕ್ಕೆ ಅನುಗುಣವಾದ ಸಂವಿಧಾನ ರಚಿಸಿಕೊಟ್ಟಿದ್ದಾರೆ ಎಂದರು.

ಹಣ ಮಾಡುವುದು ವಕೀಲ ವೃತ್ತಿಯ ಉದ್ದೇಶವಲ್ಲ:

ನ್ಯಾಯ ಪಡೆಯುವುದು ಈಗ ದುಬಾರಿಯಾಗಿದ್ದು, ಅನೇಕರಿಗೆ ಹಣವಿಲ್ಲದೆ ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಅನ್ಯಾಯವಾಗುತ್ತದೆ. ಹಣ ಮಾಡುವುದು ವಕೀಲ ವೃತ್ತಿಯ ಉದ್ದೇಶವಲ್ಲ ನ್ಯಾಯ ಕೊಡಿಸುವುದು ಉದ್ದೇಶವಾಗಬೇಕು.ತ್ವರಿತವಾಗಿ ನ್ಯಾಯ ಸಿಗುವ ರೀತಿ ಮಾಡಬೇಕು. ನ್ಯಾಯ ವಿಳಂಬವಾದರೆ, ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತನ್ನು ನೆನಪಿಡಬೇಕು. ಇದು ವಕೀಲರ  ದಿನನಿತ್ಯದ ಮಂತ್ರವಾಗಬೇಕು. ವಕೀಲರು ಮನಸ್ಸು ಮಾಡಿದರೆ ವಿಳಂಬವಾಗುವುದನ್ನು ತಪ್ಪಿಸಬಹುದು  ಎಂದರು.

ಪ್ರಕರಣಗಳನ್ನು  ವರ್ಷಾನುಗಟ್ಟಲೆ ಎಳೆಯಬಾರದು

ಸತ್ಯ, ಸತ್ವ, ಸಾಕ್ಷ್ಯಾಧಾರಗಳಿಲ್ಲದ ಪ್ರಕರಣಗಳನ್ನು  ವರ್ಷಾನುಗಟ್ಟಲೆ ಎಳೆಯಬಾರದು  ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು. ಅಶಕ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು. ಕಕ್ಷಿದಾರರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ನೋಡಿಕೊಂಡು ಶುಲ್ಕ ಪಡೆಯಬೇಕೆಂದರು. ನ್ಯಾಯ ಕೊಡಿಸುವ ಕೆಲಸವನ್ನು ಮಾಡಲೇಬೇಕು ಎಂದರು.

ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು

ಸರ್ಕಾರಿ ವಕೀಲರು  ಹೆಚ್ಚು ಮಾತನಾಡುವುದಿಲ್ಲ ಎಂಬ ಆರೋಪವಿದೆ. ಪ್ರಕರಣವನ್ನು ಚೆನ್ನಾಗಿ ಓದಿ, ಸರಿಯಾದ ರೀತಿಯಲ್ಲಿ ನ್ಯಾಯಾಧೀಶರ ಮುಂದೆ ವಿಷಯ ಮಂಡಿಸಬೇಕು ಹಾಗು ಕಕ್ಷಿದಾರರ ಹಕ್ಕನ್ನು ರಕ್ಷಿಸಬೇಕು. ಬೆಂಗಳೂರಿನ ವಕೀಲರ ಸಂಘ ಏಷ್ಯಾ ಖಂಡದಲ್ಲೇ ಅತ್ಯಂತ ದೊಡ್ಡ ಸಂಘವಾಗಿದ್ದು 25 ಸಾವಿರ ಸದಸ್ಯರನ್ನು ಹೊಂದಿರುವುದು ಸಣ್ಣ ಸಂಗತಿಯೇನಲ್ಲ ಎಂದರು.

ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ:

ವಕೀಲ ಸಂಘದವರು ಸಲ್ಲಿಸಿರುವ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಕಲ್ಯಾಣ ನಿಧಿಗೆ ಅನುದಾನವನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು ಸರ್ವೋಚ್ಚ ನ್ಯಾಯಾಲಯ ಪೀಠದ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

More articles

Latest article