ಚೆನ್ನೈ: ತಮಿಳು ನಟ ವಿಶಾಲ್ ತಮ್ಮ ನಟನೆಯ ‘ಮದಗಜರಾಜ’ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಚಿತ್ರದ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ನಟ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ಸಿನಿಮಾ ಕುರಿತು ಮಾತನಾಡುವಾಗ ವಿಶಾಲ್ ತೊದಲಿದ್ದಾರೆ. ಮೈಕ್ ಹಿಡಿದುಕೊಳ್ಳುವಾಗ ಅವರ ಕೈ ನಡುಗುತ್ತಿತ್ತು. ವಿಶಾಲ್ ಅವರ ಈ ಸ್ಥಿತಿಯನ್ನು ಕಂಡು ಅವರ ಫ್ಯಾನ್ಸ್ ಮಮ್ಮಲ ಮರುಗಿದ್ದಾರೆ. ಆದರೆ ವೈದ್ಯರ ವರದಿ ಯಾರೊಬ್ಬರೂ ಆತಂಕಗೊಳ್ಳಬೇಕಾಗಿಲ್ಲ ಎಂದು ಹೇಳುತ್ತದೆ.
ಬರೋಬ್ಬರಿ 12 ವರ್ಷಗಳ ಹಿಂದೆ ತೆರೆ ಕಾಣಬೇಕಿದ್ದ ‘ಮದಗಜರಾಜ’ ಸಿನಿಮಾ ಜ.12ರಂದು ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಪ್ರೊಮೋಷನ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮೈಕ್ ಹಿಡಿದು ಮಾತನಾಡುವ ವೇಳೆ ಅವರ ಕೈ ನಡುಗುತ್ತಿತ್ತು ಮತ್ತು ಮಾತು ತೊದಲುತ್ತಿತ್ತು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗದೇ ಇರಲಿ ಎಂದು ವಿಶಾಲ್ ತಮ್ಮ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ವೈರಲ್ ಫೀವರ್ ಬಂದಿದೆ ಅಷ್ಟೇ. ಆದರೂ ಸಿನಿಮಾ ಪ್ರಚಾರಕ್ಕೆ ಬಂದಿದ್ದೇನೆ ಎಂದಿದ್ದಾರೆ.
ವಿಶಾಲ್ ಆರೋಗ್ಯ ಕುರಿತು ವೈದ್ಯರು ಹೆಲ್ತ್ ಬುಲೆಟಿನ್ ಹಂಚಿಕೊಂಡಿದ್ದಾರೆ. ವಿಶಾಲ್ ವೈರಲ್ ಫೀವರ್‌ನಿಂದ ಬಳಲುತ್ತಿದ್ದು, ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ವಿಶಾಲ್ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ, ಸೋನು ಸೂದ್ ‘ಮದಗಜರಾಜ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

                                    