ವಿಜಯಪುರ: ತೆರೆದ ಕೊಳವೆ ಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಮಗು ಸಾತ್ವಿಕ್ ರಕ್ಷಣೆಗೆ ಕೊನೆಯ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಮಗುವನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಂಧ್ರ ಚಿಕ್ಕದಾಗಿರುವ ಹಿನ್ನೆಲೆಯಲ್ಲಿ ಯಂತ್ರಗಳ ಬದಲಿಗೆ ಕೈಗಳಲ್ಲೇ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದ್ದು, ಮಗುವಿನ ಸುರಕ್ಷತೆ ದೃಷ್ಟಿಯಿಂದ ಈ ಬದಲಾವಣೆ ಮಾಡಿಕೊಳ್ಳಲಾಗಿದೆ.
ಬೋರ್ ವೆಲ್ ನಲ್ಲಿ ಮಗು ತಲೆ ಕೆಳಗಾಗಿ ಬಿದ್ದಿದ್ದು, ಎರಡು ಕೈಗಳು ಮಗುವಿನ ದೇಹಕ್ಕೆ ಒತ್ತಿಕೊಂಡಿವೆ. ತಲೆಕೆಳಗಾಗಿ ಬಿದ್ದಿರುವುದರಿಂದ ಮಗು ಪೈಪ್ ಒಳಗೆ ಜಾಮ್ ಆಗಿದ್ದು, ಹೊರತೆಗೆಯಲು ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಯಬೇಕಿದೆ.
ಎಂಡೋಸ್ಕೋಪಿ ಕ್ಯಾಮೆರಾದಲ್ಲಿ ಸಾತ್ವಿಕ್ ತಲೆ ದೃಶ್ಯ ಸೆರೆಯಾಗಿದ್ದು, ರಕ್ಷಣಾ ಸಿಬ್ಬಂದಿ ಸುತ್ತುವರೆದು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಬಾಲಕನನ್ನು ರಕ್ಷಿಸುವ ಕಾರ್ಯ ನಿನ್ನೆಯಿಂದಲೇ ನಡೆಯುತ್ತಿದ್ದು, ಜಿಲ್ಲಾಡಳಿತ ಮಗುವನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.
ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಅಧಿಕಾರಿಗಳಿಂದ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.