ಸಕಲೇಶಪುರ: ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಕಲೇಶಪುರದಲ್ಲಿ ಭಾರಿ ಪ್ರಮಾಣದ ಭೂಕುಸಿತ ಘಟನೆಗಳು ಸಂಭವಿಸುತ್ತಿದ್ದು, ಮಹಾಮಳೆಯಿಂದಾಗಿ ತಾಲ್ಲೂಕಿನ ಹಾರ್ಲೆ ಗ್ರಾಮದಲ್ಲಿ ಇಂದು ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಭೂಕುಸಿತದ ಭೀಕರತೆಗೆ ರಸ್ತೆಯೊಂದು ನೀರಿನಲ್ಲಿ ಕೊಚ್ಚಿಹೋಗಿದೆ. ಕೊಚ್ಚಿಹೋದ ರಸ್ತೆ ಪಕ್ಕದಲ್ಲೇ ಹ ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಹಾದುಹೋಗಿದೆ.
ನಿನ್ನೆ ರಾತ್ರಿ ಎಡೆಬಿಡದೆ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿದ್ದು ಬಾರ್ಲಿ-ಮಲ್ಲಗದ್ದೆ-ಕಾಡುಮನೆ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಭೂಕುಸಿತದ ತೀವ್ರತೆಗೆ ರಸ್ತೆಯು 200 ಮೀಟರ್‌ಗೂ ಹೆಚ್ಚು ದೂರ ಕೊಚ್ಚಿ ಹೋಗಿದೆ. ರಸ್ತೆಯೇ ಕೊಚ್ಚಿ ಹೋಗಿರುವುದರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಎತ್ತಿನಹೊಳೆ ಕಾಮಗಾರಿಯ ಪೈಪ್ ಲೈನ್ ಜೊತೆಗೆ ಭೂಮಿ ಕೊಚ್ಚಿಹೋಗಿದೆ.
ಇನ್ನೊಂದೆಡೆ ಸಕಲೇಶಪುರ ತಾಲ್ಲೂಕಿನ ಮಠಸಾಗರದ ಗ್ರಾಮದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಜನರು ಹೊರಬರಲಾಗದ ಸ್ಥಿತಿ ನಿರ್ಮಾಣಗೊಂಡಿದೆ.
ಮಠಸಾಗರ-ಕೃಷ್ಣಾಪುರ-ಸಕಲೇಶಪುರ ರಸ್ತೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರ ಪರದಾಟ ಪಡುತ್ತಿದ್ದಾರೆ.